ಬೆಂಗಳೂರು: ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಮೃತಪಟ್ಟ 11 ಜನ ಆರ್ಸಿಬಿ ಅಭಿಮಾನಿಗಳ ಸ್ಮರಣಾರ್ಥವಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರ ಆವರಣದಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಗೃಹಸಚಿವ ಡಾ.ಜಿ. ಪರಮೇಶ್ವರ್ ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ಮೃತ ಆರ್ಸಿಬಿ ಅಭಿಮಾನಿಗಳಿಗೆ ಗೌರವ ನಮನ ಸಲ್ಲಿಸಲಾಯಿತು. ಶಾಸಕ ಎನ್.ಎ.ಹ್ಯಾರೀಸ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆರ್ಸಿಬಿ ಸಿಇಒ ರಾಜೇಶ್ ಮೆನನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಎಸ್ಸಿಎ ಪದಾಧಿಕಾರಿಗಳಾದ ಸಂತೋಷ್ ಮೆನನ್, ಸುಜಿತ್ ಸೋಮಸುಂದರ್, ವಿನಯ್ ಮೃತ್ಯುಂಜಯ ಮುಂತಾದವರು ಇದ್ದರು.

