ಬೆಂಗಳೂರು: ಹೊಸ ಮತ್ತು ಹೆಚ್ಚು ಎಲ್ಪಿಜಿ ಗ್ಯಾಸ್ ಸಂಪರ್ಕಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ, ಆನ್ಲೈನ್ ಅಥವಾ ಆಫ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅಖಿಲ ಭಾರತ ಎಲ್ಪಿಜಿ ಒಕ್ಕೂಟದ ಕರ್ನಾಟಕ ವೃತ್ತದ ಕಾರ್ಯನಿರ್ವಾಹಕ ಅಧ್ಯಕ್ಷ ಎನ್. ಸತ್ಯನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಸಿಲಿಂಡರ್ ಗಳನ್ನು ಅನಧಿಕೃತ ಮಾರಾಟಗಾರರು ಅಥವಾ ಮಧ್ಯವರ್ತಿಗಳಿಂದ ಖರೀದಿಸಬಾರದು. ಪ್ರತಿಯೊಂದು ವಿತರಣೆಗೆ ನಗದು ರಸೀದಿ ಪಡೆಯಬೇಕು ಎಂದು ಕೋರಿದ್ದಾರೆ.
ಸಿಂಗಲ್ ಸಿಲಿಂಡರ್ ಮತ್ತು ಡಬಲ್ ಸಿಲಿಂಡರ್ ಗೂ 25 ದಿನದ ನಂತರ ಬುಕಿಂಗ್ ಮಾಡಬಹುದು. ರಾಜ್ಯಾದ್ಯಂತ ಎಂಟರಿಂದ ಹತ್ತು ದಿನ ಸಿಲಿಂಡರ್ ವಿತರಣೆ ವಿಳಂಬವಾಗುತ್ತಿದ್ದು, ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಜನರು ಆತಂಕದಿಂದ ಗ್ಯಾಸ್ ಏಜೆನ್ಸಿಗಳು, ಗೋದಾಮುಗಳ ಬಳಿ ಬರಬಾರದು. ಯುದ್ಧದ ಪರಿಣಾಮ ಸಿಲಿಂಡರ್ ಸಿಗಲ್ಲ ಎಂದು ಆತಂಕಕ್ಕೆ ಒಳಗಾಗಬಾರದು. ಊಹಾಪೋಹಗಳಿಗೆ ಕಿವಿಗೊಡಬಾರದು. ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬಾರದು. ತೈಲ ಮಾರುಕಟ್ಟೆ ಕಂಪನಿಗಳ ನಿರ್ದೇಶನದ ಅನ್ವಯ ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.

