ಬೀದರ್: ಜಿಲ್ಲೆಯ ಪ್ರತಿಷ್ಠಿತ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (BRIMS) ಆವರಣದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಮೃತ ವಿದ್ಯಾರ್ಥಿಯನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ನಿವಾಸಿ ಅನಿಷ್ಕಾರ್ ಚೌಹಾಣ್ ಎಂದು ಗುರುತಿಸಲಾಗಿದೆ. ಅನಿಷ್ಕಾರ್ ಬೀದರ್‌ನ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಅನಿಷ್ಕಾರ್ ಚೌಹಾಣ್ ಅವರು ಕಾಲೇಜಿನ ವಸತಿ ನಿಲಯದ (Hostel) ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣ ಮುಗಿಸಿ ಇನ್ನೇನು ಸಮಾಜದ ಸೇವೆಯಲ್ಲಿ ತೊಡಗಬೇಕಿದ್ದ ಪ್ರತಿಭಾವಂತ ವಿದ್ಯಾರ್ಥಿಯ ಅಕಾಲಿಕ ಸಾವು ಕುಟುಂಬದವರು ಮತ್ತು ಸಹಪಾಠಿಗಳಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಎಂಬಿಬಿಎಸ್ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದ ಅನಿಷ್ಕಾರ್ ಚೌಹಾಣ್ ಕಲಬುರಗಿಯ ಚಿಂಚೋಳಿ ಮೂಲದವನು ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಶೈಕ್ಷಣಿಕ ಒತ್ತಡವೇ ಅಥವಾ ವೈಯಕ್ತಿಕ ಕಾರಣಗಳೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

