ಜನವರಿ 24ರಿಂದ ಸಾಲು ಸಾಲು ರಜೆ. ಸೋಮವಾರದ ತನಕ ಇರುವ ರಜೆಯನ್ನು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಿ ಕಳೆಯುವ ಜನರಿಗೆ ಮಹತ್ವದ ಅಪ್‌ಡೇಟ್. ಶಿವಣ್ಣ ಮತ್ತು ಸುದೀಪ್ ಅಭಿನಯನದ ಚಿತ್ರಗಳು ಒಂದೇ ದಿನ ಒಟಿಟಿಗೆ ಬಂದಿವೆ.
ಹೌದು 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಒಟಿಟಿಗೆ ಬಂದಿವೆ. ಈ ಮೂಲಕ ಇಬ್ಬರು ನಟರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುವ ಸುದ್ದಿ ಸಿಕ್ಕಿದೆ.
ಜನವರಿ 24 ರಿಂದ 26ರ ತನಕ ಇರುವ ಸರಣಿ ರಜೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಚಿತ್ರಗಳು ಈ ವಾರ ಒಟಿಟಿಗೆ ಬಂದಿವೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗದ ಅಭಿಮಾನಿಗಳು ಮನೆಯಲ್ಲಿಯೇ ನೆಚ್ಚಿನ ನಟರನ್ನು ನೋಡಬಹುದು.
ಸಿನಿಮಾಗಳ ಪಟ್ಟಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಮಾರ್ಕ್’ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ನಟನೆಯ ‘45’ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗಿದ್ದವು. ಈಗ ಒಟ್ಟಿಗೆ ಒಟಿಟಿಗೆ ಬಂದಿವೆ.
‘45’ ಸಿನಿಮಾ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಚಿತ್ರಮಂದಿರದಲ್ಲಿ ಆ ಮಟ್ಟಿಗೆ ಸದ್ದು ಮಾಡಲಿಲ್ಲ. ಈಗ ಒಟಿಟಿಗೆ ಬಂದು ಬಿಟ್ಟಿದೆ. ಇದನ್ನು Zee-5ನಲ್ಲಿ ವೀಕ್ಷಣೆ ಮಾಡಬಹುದು.
ಭರ್ಜರಿ ಕಲೆಕ್ಷನ್ ಮಾಡಿದ್ದ ‘ಮಾರ್ಕ್’ ಚಿತ್ರ ಜನವರಿ 23ರಂದು ಒಟಿಟಿಗೆ ಬಂದಿದೆ. ಆದರೆ ಈ ಎರಡು ಚಿತ್ರಗಳು ಬೇರೆ ಬೇರೆ ವೇದಿಕೆಯಲ್ಲಿದೆ. ‘ಮಾರ್ಕ್’ ಚಿತ್ರವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರದ ಬಳಿಕ ‘ಮಾರ್ಕ್’ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ತಮಿಳಿನಲ್ಲೂ ತೆರೆಗೆ ಬಂದಿದ್ದ ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈಗ ಒಟಿಟಿಯಲ್ಲಿ ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿಯಲ್ಲಿ ವೀಕ್ಷಿಸಬಹುದು.
ಜೀ-ಕನ್ನಡದಲ್ಲಿ ಕಾಂತಾರ: ಒಟಿಟಿ ಮಾತ್ರವಲ್ಲ ಕನ್ನಡ ಕಿರುತೆರೆಯಲ್ಲೂ ಹಲವು ಸಿನಿಮಾಗಳು ಬರಲಿವೆ. ಜೀ ಕನ್ನಡ ತನ್ನ ವೀಕ್ಷಕರಿಗೆ ಈಗಾಗಲೇ ಗುಡ್‌ನ್ಯೂಸ್ ನೀಡಿದೆ. ಧಾರಾವಾಹಿ, ರಿಯಾಲಿಟಿ ಶೋ ಮೂಲಕ ಜನರ ಮನ ಗೆದ್ದಿರುವ ಚಾನಲ್ ಈಗ ಹೊಸ ಸಿನಿಮಾ ಘೋಷಣೆ ಮಾಡಿದೆ.
ಜೀ ಕನ್ನಡ ವಾಹಿನಿಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಜನವರಿ 24 ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಚಿತ್ರಮಂದಿರ, ಒಟಿಟಿಯಲ್ಲಿ ನೋಡಲು ಸಾಧ್ಯವಾಗದ ಜನರು ಶನಿವಾರ ಸಂಜೆ ಟಿವಿಯಲ್ಲಿ ಕಾಂತಾರವನ್ನು ವೀಕ್ಷಣೆ ಮಾಡಬಹುದು.

