ಮಂಡ್ಯ: ಮಂಡ್ಯದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಗುಜರಿ ಅಂಗಡಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಗುಜರಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಅಂಗಡಿಯ ಪಕ್ಕದಲ್ಲಿದ್ದ ಆಲೆಮನೆಗೂ ಹಾನಿಯುಂಟಾಗಿದೆ. ಗುಜರಿ ಅಂಗಡಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಪಕ್ಕದ ಆಲೆಮನೆಗೂ ವ್ಯಾಪಿಸಿದ್ದು, ಸುತ್ತಮುತ್ತಲಿನ ಪ್ರದೇಶಕ್ಕೂ ಪಸರಿಸಿ, ಧಗಧಗನೆ ಹೊತ್ತಿ ಉರಿದಿದೆ.
ಬೆಂಕಿ ಅವಘಡದಿಂದಾಗಿ ಮುಗಿಲೆತ್ತರದವರೆಗೆ ದಟ್ಟ ಹೊಗೆ ಆವರಿಸಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

