ಬೆಂಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ, ಪತಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ನಡೆದಿದೆ.
ಮುರುಗೇಶ್ ಪತ್ನಿಯಿಂದಳೆ ಕೊಲೆಯಾದ ವ್ಯಕ್ತಿ. ಲಕ್ಷ್ಮೀ ಪತಿಯನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ. ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ದಂಪತಿ ವಾಸವಾಗಿದ್ದರು. ಮುರುಗೇಶ್ ಹಾಗೂ ಲಕ್ಷ್ಮೀ ದಂಪತಿಯ ಮಗಳು ಪ್ರೀತಿಸಿದವನ ಜೊತೆ ಮದುವೆಯಾಗಿ ಮನೆಬಿಟ್ಟು ಹೋಗಿದ್ದಳು. ಇದೇ ಕಾರಣಕ್ಕೆ ಮುರುಗೇಶ್ ಪತ್ನಿಯನ್ನು ಹಿಂಸಿಸುತ್ತಿದ್ದ.
ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಪದೇ ಪದೇ ಪತ್ನಿಯನ್ನು ಬೈಯ್ಯುವುದು, ಜಗಳಮಾಡಿ ಹಲ್ಲೆ ನಡೆಸುವುದು ಮಾಡುತ್ತಿದ್ದ. ಜನವರಿ 20ರಂದು ಕೂಡ ಗಂಡ-ಹೆಂಡತಿ ನಡುವೆ ಇದೇ ವಿಚಾರವಾಗಿ ಗಲಾಟೆಯಾಗಿದೆ. ರೊಚ್ಚಿಗೆದ್ದ ಪತ್ನಿ ಲಕ್ಷ್ಮೀ ಚಾಕುವಿನಿಂದ ಗಂಡನ ಎದೆಗೆ ಇರಿದು ಕೊಲೆಗೈದಿದ್ದಾಳೆ. ಬಳಿಕ ಕುಡಿದ ಅಮಲಿನಲ್ಲಿ ಆತನೇ ಇರಿದುಕೊಂಡಿದ್ದಾಗಿ ಕಥೆ ಕಟ್ಟಿದ್ದಾಳೆ. ಅನುಮಾನಗೊಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಪತಿಯನ್ನು ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಸದ್ಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

