ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿ ವಿಚಾರವಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿದ್ದ ರೈತ ಮುಖಂಡರ ಸಭೆಯಲ್ಲಿ ಎರಡು ಬಣಗಳ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಚೂನಪ್ಪ ಪೂಜಾರಿ ಬಣಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಗಲಾಟೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಸಭಾಂಗಣದಲ್ಲಿ ಕುಡಿಯಲು ನೀರಿಲ್ಲ, ಚಹಾ ಇಲ್ಲವೆಂದು ಕ್ಯಾತೆ ತೆಗೆದ ರೈತ ಮುಖಂಡರನ್ನು ಚೂನಪ್ಪ ಪೂಜಾರಿ ಸಮಾಧಾನ ಮಾಡಿದ್ದರು. ಆದರೆ ಭಾಷಣ ವೇಳೆ ಚೂನಪ್ಪ ಪೂಜಾರಿ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಬಣ ವಿರೋಧಿಸಿದ ಕಾರಣ ಗಲಾಟೆ ತೀವ್ರ ಸ್ವರೂಪ ಪಡೆದು ಬೆಳಗಾವಿಯ ಸುವರ್ಣ ಸೌಧ ರಣಾಂಗಣವಾಯಿತು.
ಕಬ್ಬು ಬೆಳೆಗೆ ಚೂನಪ್ಪ ಪೂಜಾರಿ ಭಾಷಣ ವೇಳೆ 4,500 ಪಡೆದೇ ತೀರೋಣವೆಂದು ಹೇಳಿದ್ದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಬಣ ವಿರೋಧ ವ್ಯಕ್ತಪಡಿಸಿದೆ. ಹೊರಗೆ ಪ್ರತಿ ಟನ್ ಕಬ್ಬಿಗೆ 5,500 ರೂ. ನಿಗದಿ ಮಾಡಬೇಕೆಂದು ಹೇಳುತ್ತೀರಿ. ಸುವರ್ಣಸೌಧದ ಒಳಗೆ ಪ್ರತಿ ಟನ್ ಕಬ್ಬಿಗೆ 4,500 ರೂ. ಅಂತಿದ್ದೀರಿ. ನೀವು ಸೋಟ್ಕೇಸ್ ಗಿರಾಕಿ ಎಂದು ಕೋಡಿಹಳ್ಳಿ ಬಣದ ರೈತರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಚೂನಪ್ಪ ಪೂಜಾರಿ ಬಣದ ರೈತರು ಸಿಡಿದೆದ್ದರು.
ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಗಲಾಟೆ ಆರಂಭವಾಗಿಯಿತು. ರೈತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಆರಂಭಿಸಿದ್ದ ಇಬ್ಬರು ರೈತರನ್ನು ಪೊಲೀಸರು ಹೊರಗೆ ಕರೆದೊಯ್ದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಸಭೆಯಲ್ಲಿ ವಾತಾವರಣ ತಿಳಿಯಾಗಿದೆ.
ಗಲಾಟೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರೈತ ಮುಖಂಡ ಚೂನಪ್ಪ ಪೂಜಾರಿ, ಉದ್ದೇಶಪೂರ್ವಕವಾಗಿ ಬಂದು ಗಲಾಟೆ ಮಾಡಿದ್ದಾರೆ. ನಾನು ಮಾತಾಡುವಾಗಲೇ ಆತ ನೀ ಯಾರು? ಅಂತಾನೆ. ಅವರು ಕಲಬುರಗಿ ಮೂಲದವರು ಅಂತಾ ಗೊತ್ತಾಗಿದೆ. ನಾವು 3 ಗಟ್ಟಿ ಬೇಡಿಕೆ ಇಟ್ಟು ಹೋರಾಟ ಮಾಡ್ತಿದ್ದೇವೆ. ರೈತರಾಗಿ ಈ ರೀತಿ ಮಾಡೋದು ಬೇಜಾರಾಗುತ್ತೆ. ಒಗ್ಗಟ್ಟಾಗಿ ಹೋರಾಟ ಮಾಡಿ ಹಣ ತೆಗೆದುಕೊಳ್ಳಬೇಕಿದೆ. ಕೊಡಿಹಳ್ಳಿ ಚಂದ್ರಶೇಖರ್ ಬಣದವರೆಂದು ಹೇಳುತ್ತಿದ್ರು. ಎಲ್ಲರೂ ಸೇರಿಕೊಂಡು ಹೋರಾಟ ಮಾಡೋಣ ಬನ್ನಿ ಎಂದವರು ಕರೆ ನೀಡಿದ್ದಾರೆ.
ಇದೇ ವೇಳೆ ರೈತ ಮುಖಂಡ ಶಶಿಕಾಂಶ್ ಗುರೂಜಿ, ಚೂನಪ್ಪ ಪೂಜಾರಿಗೆ ಏನಾದರೂ ತೊಂದರೆಯಾದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಯಾವೊಬ್ಬ ಶಾಸಕರು ಮನೆಯಿಂದ ಹೊರಗೆ ಬರದಂತೆ ಹೋರಾಟ ಮಾಡುತ್ತೇವೆ. ರೈತರ ಗಲಾಟೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು. ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿಮಾಡಬೇಕು ಎಂದು ಒತ್ತಾಯಿಸಿದ್ದಾರೆ.

