ಮಂಡ್ಯ: ಬೈಕ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದಿದೆ.
ಮೃತರನ್ನು ಕೊಪ್ಪ ನಿವಾಸಿಗಳಾದ ಕಾವ್ಯ, ಮುತ್ತುರಾಜ್ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಗಣೇಶ ಹಬ್ಬದ ಸಂಭ್ರಮ ಮುಗಿಸಿಕೊಂಡು ಮೂವರು ಮುಂಜಾನೆ ಬೈಕ್ ಗೆ ಬೆಂಗಳೂರಿನತ್ತ ತೆರಳುತ್ತಿದ್ದರು. ಈ ವೇಳೆ ಕೊಪ್ಪದಲ್ಲಿ ಸ್ಕೂಟರ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಬಳಿಕ ಟ್ಯಾಂಕರ್ ಮೂವರ ಮೇಲೆಯೇ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ತಿಳಿದುಬರಬೇಕಿದೆ.
20 ಬೆಕ್ಕುಗಳ ಹತ್ಯೆ ಪ್ರಕರಣ: ಆರೋಪಿಗೆ 24 ಗಂಟೆಯೊಳಗೆ ಜಾಮೀನು
ಮುಂಬೈ: ಮುಂಬೈನ ಚೆಂಬೂರು ಪ್ರದೇಶದಲ್ಲಿ ಬೀದಿ ಬೆಕ್ಕುಗಳನ್ನು ಹತ್ಯೆ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದ್ದ 40 ವರ್ಷದ ವ್ಯಕ್ತಿಗೆ ಬಂಧನವಾದ 24 ಗಂಟೆಯೊಳಗೆ ಜಾಮೀನು ದೊರೆತಿರುವುದು ಪ್ರಾಣಿ ಪ್ರೇಮಿಗಳು ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರ್‌ಸಿಎಫ್ ಪೊಲೀಸರು ಶುಕ್ರವಾರ ರಾತ್ರಿ ಶಿವ ಕೇಶವ್ ಜೋಶಿ ಎಂಬ ಪನ್ವೇಲ್ ನಿವಾಸಿಯನ್ನು ಬಂಧಿಸಿದ್ದರು. ಸಿಸಿಟಿವಿ ದೃಶ್ಯಗಳು ಹಾಗೂ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್‌ನಿಂದ ಚೆಂಬೂರಿನ ಪಂಜ್ರಾಪೋಲ್ ಪ್ರದೇಶ ಹಾಗೂ ಸುತ್ತಮುತ್ತ 20ಕ್ಕೂ ಹೆಚ್ಚು ಬೆಕ್ಕುಗಳು ಮತ್ತು ಮರಿಬೆಕ್ಕುಗಳ ಮೃತದೇಹಗಳು ಪತ್ತೆಯಾಗಿವೆ. ಈ ಪ್ರಕರಣಗಳಲ್ಲಿ ಜೋಶಿಯ ಪಾತ್ರವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಕ್ಕುಗಳ ಹತ್ಯೆ ಆರೋಪ
ಮೂಲಗಳ ಪ್ರಕಾರ, ಬೆಕ್ಕುಗಳು ತನಗೆ ತೊಂದರೆ ನೀಡುತ್ತಿದ್ದ ಕಾರಣ ಅವುಗಳನ್ನು ಕೊಂದಿರುವುದಾಗಿ ಜೋಶಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ಕೆಲವು ಪ್ರಾಣಿಗಳನ್ನು ಹೂತಿರುವ ಸ್ಥಳಗಳಿಗೂ ಪೊಲೀಸರನ್ನು ಆತ ಕರೆದೊಯ್ದಿದ್ದಾನೆ ಎಂದು ವರದಿಯಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರು ಒತ್ತಾಯಿಸಿದ್ದಾರೆ.
ಪ್ರಾಣಿ ಕಾರ್ಯಕರ್ತೆಯಿಂದ ದೂರು
ಎಫ್‌ಐಆರ್ ಪ್ರಕಾರ, ಪಂಜ್ರಾಪೋಲ್ ನಿವಾಸಿ ಹಾಗೂ ಪ್ರಾಣಿ ಪ್ರೇಮಿಯಾಗಿರುವ 53 ವರ್ಷದ ರುಬೀನಾ ಅಬ್ದುಲ್ ಮಲಿಕ್ ಪಠಾಣ್ ಅವರು ಆ ಪ್ರದೇಶದ ಬೀದಿ ಬೆಕ್ಕುಗಳಿಗೆ ನಿಯಮಿತವಾಗಿ ಆಹಾರ ನೀಡುತ್ತಿದ್ದರು. ಅಗತ್ಯವಿದ್ದಾಗ ಅವುಗಳಿಗೆ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡುತ್ತಿದ್ದರು.
ಸೆಪ್ಟೆಂಬರ್ 5ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಪಠಾಣ್ ಅವರು ಬೀದಿ ಬೆಕ್ಕುಗಳಿಗೆ ಆಹಾರ ನೀಡಲು ಕಾಮವಾಡಿಯ ಶನಿ ಮಂದಿರದ ಸಮೀಪದ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಬೆಕ್ಕು ಹಾಗೂ ಮರಿಬೆಕ್ಕಿನ ಮೃತದೇಹಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಅವುಗಳಲ್ಲಿ ಒಂದು ಬೆಕ್ಕಿನ ತಲೆಗೆ ಗಂಭೀರ ಗಾಯವಾಗಿತ್ತು. ಭಾರವಾದ ವಸ್ತುವಿನಿಂದ ಹೊಡೆದ ಪರಿಣಾಮ ಗಾಯವಾಗಿರಬಹುದು ಎಂದು ಶಂಕಿಸಲಾಗಿದೆ. ಮರಿಬೆಕ್ಕಿಗೂ ಗಂಭೀರ ಗಾಯಗಳಾಗಿದ್ದ ಬಳಿಕ ಅದು ಮೃತಪಟ್ಟಿತ್ತು ಎನ್ನಲಾಗಿದೆ.
ಇದಕ್ಕೂ ಮುನ್ನ ಸೆಪ್ಟೆಂಬರ್ 3ರಂದು ಇದೇ ಪ್ರದೇಶದಲ್ಲಿ ನಾಲ್ಕು ಬೆಕ್ಕುಗಳನ್ನು ಕ್ರೂರವಾಗಿ ಹತ್ಯೆ ಮಾಡಿರುವುದನ್ನು ಪಠಾಣ್ ಗಮನಿಸಿದ್ದರು ಎನ್ನಲಾಗಿದೆ. ಬೀದಿ ಬೆಕ್ಕುಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ಶಂಕಿಸಿದ ಅವರು ಆರಂಭದಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆ PETAಗೆ ಮಾಹಿತಿ ನೀಡಿದ್ದರು.
ಸಂಸ್ಥೆಯ ಸಲಹೆಯಂತೆ, ಪಠಾಣ್ ಅವರು ಎರಡು ಬೆಕ್ಕುಗಳ ಮೃತದೇಹಗಳನ್ನು ಪಾರೆಲ್‌ನಲ್ಲಿರುವ ಪ್ರಾಣಿ ಆಸ್ಪತ್ರೆಗೆ ಕೊಂಡೊಯ್ದರು. ಬಳಿಕ ಬಾಂದ್ರಾ ನಿವಾಸಿ ಹಾಗೂ ಮತ್ತೊಬ್ಬ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಪೂಜಾ ಶ್ರೀವಾಸ್ತವ್ ಅವರೊಂದಿಗೆ ಆರ್‌ಸಿಎಫ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಪ್ರಕರಣದಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ ಸೇರಿದಂತೆ BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

