ನವದೆಹಲಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇರಳದ ಇಡುಕ್ಕಿಯಲ್ಲಿ ನಡೆದಿದ್ದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಜನರು ಅನಕ್ಷರಸ್ಥರು. ಹೀಗಾಗಿ ನರೇಂದ್ರ ಮೋದಿ ಅಲ್ಲಿನ ಜನರನ್ನು ಸುಲಭವಾಗಿ ದಾರಿ ತಪ್ಪಿಸಬಹುದು, ಆದರೆ ಕೇರಳದ ಜನರು ಹೆಚ್ಚು ಸಂವೇದನಾಶೀಲ ಮತ್ತು ವಿದ್ಯಾವಂತರು. ಹೀಗಾಗಿ ಅವರನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲ ಎಂದಿದ್ದರು.
ಗುಜರಾತಿಗರು ಅನಕ್ಷರಸ್ಥರು ಎಂಬ ತಮ್ಮ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಮಲ್ಲಿಕಾರ್ಜುನ ಖರ್ಗೆ, ತಮ್ಮ ಮಾತಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ನನ್ನ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದಾಗ್ಯೂ, ನಾನು ಹೃತ್ಪೂರ್ವಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಗುಜರಾತ್ ಜನರ ಭಾವನೆಗಳಿಗೆ ಧಕ್ಕೆಯುಂಟುಮಾಡುವುದು ನನ್ನ ಉದ್ದೇಶವೇ ಅಲ್ಲ. ಅವರ ಮೇಲೆ ನನಗೆ ಸದಾ ಅತ್ಯಂತ ಗೌರವವಿದೆ ಮತ್ತು ಅದು ಮುಂದುವರೆಯುತ್ತದೆ ಎಂದು ಹೇಳುವ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇರಳದಲ್ಲಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಭಾನುವಾರ ಅಸ್ಸಾಂನಲ್ಲಿ ನಿಲಾಂಬಜಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ಕುರಾನ್‌ನಲ್ಲಿ ನಮಾಜ್ ಮಾಡುವಾಗಲೂ ವಿಷಕಾರಿ ಹಾವನ್ನು ಕಂಡರೆ ಅದನ್ನು ಕೊಲ್ಲಬೇಕು ಎಂದು ಹೇಳಲಾಗಿದೆ. ಆರ್‌ಎಸ್‌ಎಸ್ ಅಥವಾ ಬಿಜೆಪಿ ಕೂಡ ಅದೇ ರೀತಿಯ ಹಾವು, ಅವನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ.
ಖರ್ಗೆ ಅವರ ಈ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

