HomeKarnatakaಮಲೆ ಮಹದೇಶ್ವರ ಬೆಟ್ಟದಲ್ಲಿ ಕೊನೆಗೂ ಬೋನಿಗೆ ಬಿದ್ದ ನರಭಕ್ಷಕ ಚಿರತೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೊನೆಗೂ ಬೋನಿಗೆ ಬಿದ್ದ ನರಭಕ್ಷಕ ಚಿರತೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ನಾಗಮಲೆ ಅರಣ್ಯ ಪ್ರದೇಶದಲ್ಲಿ ಪಾದಯಾತ್ರಿ ಬಾಲಕನನ್ನು ಚಿರತೆ ಬಲಿ ಪಡೆದ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದ್ ನಿರಂತರ ಕಾರ್ಯಾಅಚರಣೆ ನಡೆಸಿ ಕೊನೆಗೂ ನರಭಕ್ಷಕ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿದೆ. ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಹಾಡಿ ಬಳಿ ಇಟ್ಟಿದ್ದ ಬೋನಿನಲ್ಲಿ ಹೆಣ್ಣು ಚಿರತೆಯು ಸೆರೆಯಾಗಿದ್ದು, ಕಾಡಂಚಿನ ಗ್ರಾಮಸ್ಥರು ಹಾಗೂ ಮಲೆ ಮಹದೇಶ್ವರ ಬೆಟ್ಟದ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಾಲಕನನ್ನು ಕೊಂದಿದ್ದು ಇದೇ ಚಿರತೆ ಎಂಬುದಕ್ಕೆ ಸದ್ಯಕ್ಕೆ ಯಾವ ಸಾಕ್ಷಿಯೂ ಇಲ್ಲ. ಹಾಗಾಗಿ ಚಿರತೆ ಸ್ಯಾಂಪಲ್ ಕಲೆಕ್ಟ್ ಮಾಡಿ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.

ಕೆಲ ದಿನಗಳ ಹಿಂದೆ ಹರ್ಷಿತ್ ಎಂಬ ಬಾಲಕ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದ ವೇಳೆ ದಟ್ಟ ಅರಣ್ಯದ ಹಾದಿಯಲ್ಲಿ ನಡೆದು ಹೋಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ನಡೆಸಿ ತಿಂದು ತೇಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದಿನಿಂದ ಮಲೆ ಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವೈಲ್ಡ್ ಲೈಫ್ ಸಿಬ್ಬಂದಿ ಜಂಟಿಯಾಗಿ ಚಿರತೆ ಸೆರೆಗೆ ಬೃಹತ್ ಕಾರ್ಯಾಚರಣೆ ನಡೆಸಿದ್ದರು. ಸುಮಾರು 30 ಮಂದಿ ಚಿರತೆ ತಜ್ಞರು ಶಾರ್ಪ್ ಶೂಟರ್ಸ್ ಹಾಗೂ ಅರಣ್ಯ ವೀಕ್ಷಕರು ಕಳೆದ ಎರಡು ವಾರಗಳಿಂದ ಹಗಲಿರುಳು ದಟ್ಟ ಅರಣ್ಯದಲ್ಲಿ ಕೂಂಬಿಂಗ್ ನಡೆಸುತ್ತಿದ್ದರು. ಈ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೂ ಚಿರತೆ ಬರೋಬ್ಬರಿ 5 ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ತಿಂದಿತ್ತು.

ಚಿರತೆ ಹಾವಳಿ ತಡೆಯಲು ಅರಣ್ಯ ಇಲಾಖೆಯು ಇಂಡಿಗನತ್ತ, ನಾಗಮಲೆ, ಮೆಂದಾರೆ ಸೇರಿದಂತೆ ಒಟ್ಟು ನಾಲ್ಕು ಆಯಕಟ್ಟಿನ ಜಾಗಗಳಲ್ಲಿ ಬೋನುಗಳನ್ನು ಇಟ್ಟಿತ್ತು. ಈ ಪೈಕಿ ಇಂಡಿಗನತ್ತ ಹಾಡಿಯ ಬಳಿ ಇರಿಸಲಾಗಿದ್ದ ವಿಶೇಷ ‘ತುಮಕೂರು ಕೇಜ್’ನಲ್ಲಿ ಶ್ವಾನವೊಂದನ್ನು ಕಟ್ಟಲಾಗಿತ್ತು. ಇಂದು ಮುಂಜಾನೆ ಆ ಶ್ವಾನವನ್ನು ಬೇಟೆಯಾಡಲು ಬಂದ ಚಿರತೆಯು ಬೋನಿನೊಳಗೆ ಪ್ರವೇಶಿಸುತ್ತಿದ್ದಂತೆ ಲಾಕ್ ಆಗಿದೆ.

ಬೋನಿನಲ್ಲಿ ಸಿಲುಕಿರುವ ಚಿರತೆಯೇ ನಾಗಮಲೆಯಲ್ಲಿ ಹರ್ಷಿತ್ ಎಂಬ ಬಾಲಕನನ್ನು ಕೊಂದ ನರಭಕ್ಷಕನಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ. ಇದಕ್ಕಾಗಿ ಸೆರೆಯಾದ ಚಿರತೆಯ ಲಾಲಾರಸ, ಮಲ ಮತ್ತು ಮೂತ್ರದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೆಣ್ಣು ಚಿರತೆ ಬೋನಿಗೆ ಬಿದ್ದ ಬೆನ್ನಲ್ಲೇ ಮಲೇ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಇಂದು ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದೆ. ಇದು ಕೂಡ ಭಕ್ತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular