ಬೆಂಗಳೂರು: ಸಂಕ್ರಾಂತಿ ಎಂದರೆ ಕೇವಲ ರಜೆಯಲ್ಲ, ಅದು ಮಣ್ಣಿನ ಸಂಸ್ಕೃತಿ.ನಾಡಿನಾದ್ಯಂತ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಸಡಗರ ಮನೆಮಾಡಿದೆ. ಆದರೆ, ಈ ಬಾರಿ ಹಬ್ಬದ ದಿನಾಂಕ ಮತ್ತು ರಜೆಯ ವಿಚಾರದಲ್ಲಿ ಸಾರ್ವಜನಿಕರಲ್ಲಿ ಸಣ್ಣದೊಂದು ಗೊಂದಲ ಉಂಟಾಗಿದೆ. ಕ್ಯಾಲೆಂಡರ್‌ನಲ್ಲಿ ಹಬ್ಬ 14ಕ್ಕೆ ಎಂದು ತೋರಿಸುತ್ತಿದ್ದರೆ, ಸರ್ಕಾರದ ರಜೆ ಪಟ್ಟಿಯಲ್ಲಿ ಜನವರಿ 15ಕ್ಕೆ ರಜೆ ಘೋಷಿಸಲಾಗಿದೆ. ಹಾಗಾದರೆ ಹಬ್ಬ ಆಚರಿಸುವುದು ಯಾವಾಗ? ಪೂಜೆಗೆ ಸರಿಯಾದ ಸಮಯ ಯಾವುದು? ಇಲ್ಲಿದೆ ಮಾಹಿತಿ.
ಜನವರಿ 14 ಹಬ್ಬಕ್ಕೆ ಶ್ರೇಷ್ಠ
ಜ್ಯೋತಿಷ್ಯ ಶಾಸ್ತ್ರ ಮತ್ತು ದೃಕ್ ಪಂಚಾಂಗದ ಪ್ರಕಾರ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದು ಜನವರಿ 14, ಬುಧವಾರ ಮಧ್ಯಾಹ್ನ 3:13ಕ್ಕೆ. ಸಂಪ್ರದಾಯದಂತೆ ಸೂರ್ಯಾಸ್ತದ ಮೊದಲು ಸಂಕ್ರಮಣ ಸಂಭವಿಸುವುದರಿಂದ ಜನವರಿ 14ರಂದೇ ಹಬ್ಬದ ಪೂಜೆ, ಪುಣ್ಯಸ್ನಾನ ಮತ್ತು ದಾನ-ಧರ್ಮಗಳನ್ನು ಮಾಡುವುದು ಶಾಸ್ತ್ರೋಕ್ತ. ಜನವರಿ 15ರಂದು ಸರ್ಕಾರಿ ರಜೆ ಇದ್ದರೂ, ಹಬ್ಬದ ಧಾರ್ಮಿಕ ಆಚರಣೆಗಳು ಬುಧವಾರವೇ (ಜ.14) ನಡೆಯಲಿವೆ. ಹೀಗಾಗಿ ಈ ಬಾರಿ ಸತತ ಎರಡು ದಿನ ಹಬ್ಬದ ಮಜಾ ಸವಿಯಬಹುದು
ಸಾಮಾನ್ಯವಾಗಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ.ಪುಣ್ಯಕಾಲದ ಸಮಯ (ಜನವರಿ 14, 2026)ಸಂಕ್ರಾಂತಿಯ ದಿನ ಪುಣ್ಯಸ್ನಾನ ಮತ್ತು ದಾನ ಮಾಡಲು ಈ ಸಮಯ ಬಹಳ ಮುಖ್ಯ
ಪುಣ್ಯಕಾಲದ ಸಮಯ
ಮಕರ ಸಂಕ್ರಾಂತಿ ಹಬ್ಬ: ಜನವರಿ 14, ಬುಧವಾರ
ಪುಣ್ಯಕಾಲ: ಮಧ್ಯಾಹ್ನ 3.13ರಿಂದ ಸಂಜೆ 6.15ರವರೆಗೆ (ಒಟ್ಟು 3 ತಾಸು 2ನಿಮಿಷ)
ಮಹಾ ಪುಣ್ಯಕಾಲ: ಮಧ್ಯಾಹ್ನ 3.13ರಿಂದ ಸಂಜೆ 5.02ರವರೆಗೆ (ಒಟ್ಟು 1 ತಾಸು 49 ನಿಮಿಷ)
ಸುಗ್ಗಿ ಹಬ್ಬದ ಸಡಗರ
ಹಬ್ಬದ ಕಳೆ ಮನೆ ಮುಂದೆ ಹಾಕುವ ಬಣ್ಣಬಣ್ಣದ ರಂಗೋಲಿಯಿಂದಲೇ ಶುರುವಾಗುತ್ತದೆ.ಮನೆಮನೆಗೆ ತೆರಳಿ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಹಾಗೂ ಕಬ್ಬು ಹಂಚುವುದು ಹೆಂಗಳೆಯರ ಪಾಲಿನ ಅಚ್ಚುಮೆಚ್ಚಿನ ಕೆಲಸ.ಹಳ್ಳಿಗಳಲ್ಲಿ ಸಂಕ್ರಾಂತಿಯ ಅಸಲಿ ಸಂಭ್ರಮ ಇರುವುದೇ ದನಕರುಗಳ ಆಚರಣೆಯಲ್ಲಿ.ಕೆಂಡದ ರಾಶಿಯನ್ನು (ಕಿಚ್ಚು) ಹಾಕಿ ಅದರ ಮೇಲೆ ಸಿಂಗರಿಸಿದ ಹೋರಿಗಳನ್ನು ಮತ್ತು ದನಗಳನ್ನು ಹಾಯಿಸುವುದು ಪುರುಷರ ಪರಾಕ್ರಮದ ಸಂಕೇತ. ಇದು ಕೇವಲ ಆಚರಣೆಯಲ್ಲ, ರೈತ ಮತ್ತು ಜಾನುವಾರುಗಳ ನಡುವಿನ ಅವಿನಾಭಾವ ಸಂಬಂಧದ ಪ್ರತೀಕ
ಸಂಕ್ರಾಂತಿ: ಇತಿಹಾಸ, ಮಹತ್ವ
‘ಸಂಕ್ರಾಂತಿ’ ಎಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದು. ಈ ದಿನದಿಂದ ಸೂರ್ಯನ ಪಯಣ ಉತ್ತರಾಭಿಮುಖವಾಗಿ ಸಾಗುತ್ತದೆ. ಇದನ್ನೇ ಉತ್ತರಾಯಣ ಎಂದು ಕರೆಯಲಾಗುತ್ತದೆ. ವೇದಕಾಲದಿಂದಲೂ ಸಂಕ್ರಾಂತಿಗೆ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವಿದೆ.
ಪೌರಾಣಿಕ ಮಹತ್ವ
ಪುರಾಣಗಳ ಪ್ರಕಾರ, ಭೀಷ್ಮ ಪಿತಾಮಹರು ಮೋಕ್ಷಪ್ರಾಪ್ತಿಗಾಗಿ ಉತ್ತರಾಯಣ ಕಾಲದವರೆಗೆ ಕಾಯ್ದಿದ್ದರು. ಅದರಿಂದಲೇ ಈ ದಿನವು ಕತ್ತಲೆಯಿಂದ ಬೆಳಕಿನತ್ತ
ಅಧರ್ಮದಿಂದ ಧರ್ಮದತ್ತ ಸಾಗುವ ಸಂಕೇತವಾಗಿ ಪರಿಗಣಿಸಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಸಂಕ್ರಾಂತಿ ಸಂಭ್ರಮ
ಭಾರತದಾದ್ಯಂತ ಈ ಹಬ್ಬವನ್ನು ವಿಭಿನ್ನ ಹೆಸರು ಮತ್ತು ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ:
ದಕ್ಷಿಣ ಭಾರತ,ತಮಿಳುನಾಡು ; ಪೊಂಗಲ್
ಕರ್ನಾಟಕ ; ಸಂಕ್ರಾಂತಿ
ಉತ್ತರ ಭಾರತ,ಪಂಜಾಬ್ ; ಲೋಹ್ರಿ
ಪಶ್ಚಿಮ ಭಾರತ,ಗುಜರಾತ್, ರಾಜಸ್ಥಾನ ; ಬಣ್ಣ ಬಣ್ಣದ ಗಾಳಿಪಟ ಹಾರಿಸುವ ಉತ್ಸವ
ಪೂರ್ವ ಭಾರತ,ಪಶ್ಚಿಮ ಬಂಗಾಳ ; ಗಂಗಾ ಸಾಗರ ಮೇಳ

