2026ನೇ ವರ್ಷ ಆರಂಭವಾಗಿದೆ. ಹೊಸ ವರ್ಷ ಹಲವು ಬದಲಾವಣೆಗಳನ್ನು ತರಲಿದೆ. ಭಾರತೀಯ ರೈಲ್ವೆ ಬಳಕೆದಾರರು ಸಹ ಹೊಸ ವರ್ಷದಲ್ಲಿ ಕೆಲವು ಬದಲಾವಣೆಗಳನ್ನು ಗಮನಿಸಬೇಕಿದೆ. ಟಿಕೆಟ್ ಬುಕ್ಕಿಂಗ್, ರೈಲುದರ, ಹೊಸ ರೈಲು ಸೇವೆ ಸೇರಿದಂತೆ ವಿವಿಧ ಬದಲಾವಣೆಗಳನ್ನು ಮಾಡಲಾಗಿದೆ.
ದೇಶದಲ್ಲಿ ರಸ್ತೆ ಮತ್ತು ವಿಮಾನಯಾನಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ದರದ ಸಾರಿಗೆಯಲ್ಲಿ ರೈಲ್ವೆ ಮುಂಚೂಣಿಯಲ್ಲಿದೆ. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಹಲವಾರು ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತದೆ. ರೈಲು ಸಂಪರ್ಕ ಜಾಲವನ್ನು ವಿಸ್ತರಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
2026ರಲ್ಲಿ ಭಾರತೀಯ ರೈಲ್ವೆಯ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲಿನ ಲೋಕಾರ್ಪಣೆಯಾಗಲಿದೆ. ಅಲ್ಲದೇ ದೀರ್ಘಕಾಲದವರೆಗೆ ಬಾಕಿ ಉಳಿದಿರುವ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲು ಗಮನಹರಿಸಲಾಗುತ್ತಿದೆ.
ಹೊಸ ವೇಳಾಪಟ್ಟಿ: ಭಾರತೀಯ ರೈಲ್ವೆ ಜನವರಿ 1, 2026ರಿಂದಲೇ ಜಾರಿಗೆ ಬರುವಂತೆ ಹೊಸ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ಇದರಿಂದಾಗಿ ಹಲವು ಮಾರ್ಗದ ರೈಲು ಸಂಚಾರದ ಅವಧಿಯಲ್ಲಿ ಕೆಲವು ಬದಲಾವಣೆಗಳು ಆಗಿವೆ. ಭಾರತೀಯ ರೈಲ್ವೆ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿಯನ್ನು ನೀಡಲಾಗಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಹ ಮಾಹಿತಿಯನ್ನು ಪಡೆಯಬಹುದು.
ರೈಲು ಪ್ರಯಾಣ ದರ ಏರಿಕೆ: ಭಾರತೀಯ ರೈಲ್ವೆ ಡಿಸೆಂಬರ್ 26ರಿಂದಲೇ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಇದು 2025-26ನೇ ಆರ್ಥಿಕ ವರ್ಷದಲ್ಲಿ 2ನೇ ದರ ಏರಿಕೆಯಾಗಿದೆ. ರೈಲು ಟಿಕೆಟ್ ಬುಕ್ ಮಾಡುವ ಮೊದಲು ದರದ ಬಗ್ಗೆ ಒಮ್ಮೆ ಗಮನವನ್ನು ಹರಿಸಿ.
ಐಆರ್‌ಸಿಟಿಸಿ ಟಿಕೆಟ್ ಬುಕ್ಕಿಂಗ್ ಸಮಯ: ಆಧಾರ್ ಆಧಾರಿತವಾಗಿ ಐಆರ್‌ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡುವ ಟಕೆಟ್ ಅವಧಿಯನ್ನು ಹೆಚ್ಚಳ ಮಾಡಲಾಗಿದೆ. ಎಆರ್‌ಪಿ ವ್ಯವಸ್ಥೆಯನ್ನು ಹಂತ ಹಂತವಾಗಿ ಹಿಂಪಡೆಲಾಗುತ್ತದೆ. ಮುಂದಿನ ದಿನಗಳಲ್ಲಿ ಆಧಾರ್ ಆಧಾರಿತ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಪೂರ್ಣವಾಗಿ ಜಾರಿಗೊಳಿಸಲಾಗುತ್ತದೆ.
ವಂದೇ ಭಾರತ್ ಸ್ಲೀಪರ್ ರೈಲು: ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಈ ವರ್ಷ ಸಂಚಾರವನ್ನು ನಡೆಸಲಿದೆ. ಈಗಾಗಲೇ ಕೋಟಾ-ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ. ವೇಗದಲ್ಲಿ ರೈಲನ್ನು ಓಡಿಸಿ ಪ್ರಾಯೋಗಿಕ ಸಂಚಾರವನ್ನು ಮಾಡಲಾಗಿದೆ. ಸ್ವದೇಶಿ ನಿರ್ಮಿತ ಬೋಗಿಯ ಆಕರ್ಷಕ ವಿನ್ಯಾಸ ಗಮನಸೆಳೆಯುತ್ತಿದೆ.
ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ತಂಡ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ವಂದೇ ಭಾರತ್ ಸ್ಲೀಪರ್ ರೈಲಿನ ಅಂತಿಮ ಹೈಸ್ಪೀಡ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಸುಧಾರಿತ ಮತ್ತು ಸ್ವಾವಲಂಬಿ ರೈಲು ತಂತ್ರಜ್ಞಾನದತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲನ್ನು ದೂರದ ಪ್ರಯಾಣಿಕರ ಪ್ರಯಾಣವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಅತ್ಯಾಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಇದು ಹೊಂದಿದೆ.
ಹೈಡ್ರೋಜನ್ ರೈಲು: 2026ರಲ್ಲಿ ಭಾರತೀಯ ರೈಲ್ವೆ ಹೈಡ್ರೋಜನ್ ರೈಲನ್ನು ಪರಿಚಯಿಸಲಿದೆ. ಮೊದಲ ಹೈಡ್ರೋಜನ್ ರೈಲನ್ನು ಈಗಾಗಲೇ ಚೆನ್ನೈನ ಐಸಿಎಫ್ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣಗೊಳಿಸಿ, ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ರೈಲ್ವೆಯಲ್ಲಿ ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನದ ಬಳಕೆಗೆ ಆರ್‌ಡಿಎಸ್‌ಒ ರೂಪಿಸಿದ ಮಾನದಂಡಗಳ ಪ್ರಕಾರ ಮೊದಲ ಹೈಡ್ರೋಜನ್ ರೈಲನ್ನು ಪ್ರಾಯೋಗಿಕವಾಗಿ ಓಡಿಸಲು ಅತ್ಯಾಧುನಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹೈಡ್ರೋಜನ್ ರೈಲು-ಸೆಟ್ ತಯಾರಿಕೆ ಪೂರ್ಣಗೊಂಡಿದೆ.

