ಮಧ್ಯ ಪ್ರದೇಶ ರಾಜ್ಯದ ಕಾಂಗ್ರೆಸ್ ಶಾಸಕ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಹೇಮಂತ್ ಕಟಾರೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, 48 ಗಂಟೆಗಳ ಕಾಲ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಕಣ್ಮರೆಯಾಗಿದ್ದರು.
ಮಧ್ಯ ಪ್ರದೇಶದ ರಾಜ್ಯದ ಈ ಹಠಾತ್ ರಾಜಕೀಯ ಬೆಳವಣಿಗೆ ಎರಡು ದಿನಗಳ ಭಾರೀ ಚರ್ಚೆಗೆ ಕಾರಣವಾಗಿದ್ದು, ರಾಜ್ಯದ ರಾಜಧಾನಿ ಭೋಪಾಲ್‌ನಲ್ಲಿ ಹೊಸ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ರಾಜೀನಾಮೆಯನ್ನು ರಾಜ್ಯಸಭಾ ಚುನಾವಣೆಗೆ ಲಿಂಕ್ ಮಾಡಲಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಕೌಟುಂಬಿಕ ಮತ್ತು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವ ಹೇಮಂತ್ ಕಟಾರೆ ಬಿಜೆಪಿ ಸೇರುವ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘಾರ್ ಕುರಿತು ಅಸಮಾಧಾನವಿದೆ ಎಂಬ ಸುದ್ದಿಗಳನ್ನು ಅಲ್ಲಗಳೆದಿದ್ದಾರೆ.
ರಾಜ್ಯಸಭೆ ಚುನಾವಣೆ: ಮಧ್ಯ ಪ್ರದೇಶ ರಾಜ್ಯದಿಂದ 3 ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲು ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಲಾಗಿದೆ. ಈ ವೇಳಾಪಟ್ಟಿ ಘೋಷಣೆ ಬಳಿಕ ಹೇಮಂತ್ ಕಟಾರೆ ರಾಜೀನಾಮೆ ನೀಡಿದ್ದು, ಬಹಳ ಚರ್ಚೆಗೆ ಕಾರಣವಾಗಿದೆ.
ಹೇಮಂತ್ ಕಟಾರೆ ಹಿರಿಯ ಸಹೋದರ ಸಹ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದು, ಅವರ ರಾಜೀನಾಮೆ ಕುರಿತು ಪಕ್ಷ ಕೈಗೊಳ್ಳುವ ಎಲ್ಲಾ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ರಾಜ್ಯದ ಸಹಕಾರ ಸಚಿವ ವಿಶ್ವಾಸ್ ಸಾರಂಗ್, “ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಅಲ್ಲದೆ ಪ್ರತಿದಿನ ಆ ಪಕ್ಷದ ಮೂರರಿಂದ ನಾಲ್ಕು ಶಾಸಕರು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
“ಬಿಜೆಪಿಯ ಬಾಗಿಲಿನ ಮೇಲೆ ನೋ ಎಂಟ್ರಿ ಎಂಬ ಫಲಕವಿದ್ದರೂ ಸಹ ಕಾಂಗ್ರೆಸ್ ಶಾಸಕರು ಪ್ರತಿದಿನ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಆದರೆ ರಾಜ್ಯಸಭೆ ಚುನಾವಣೆ ಬಗ್ಗೆ ಲೆಕ್ಕಾಚಾರಗಳು ಮುಂದುವರೆದಿವೆ.
ಮಧ್ಯ ಪ್ರದೇಶ ರಾಜ್ಯದ ಒಟ್ಟು ಶಾಸಕರು 230. ಬಿಜೆಪಿ ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲಲು 58 ಮತಗಳು ಅಗತ್ಯವಿದೆ. ವಿಧಾನಸಭೆಯಲ್ಲಿ ಬಿಜೆಪಿ 165 ಮತ್ತು ಕಾಂಗ್ರೆಸ್ 64 ಶಾಸಕರ ಬಲ ಹೊಂದಿದೆ.
ಎರಡು ಸೀಟುಗಳನ್ನು ಸುಲಭವಾಗಿ ಗೆದ್ದ ಬಳಿಕವೂ ಬಿಜೆಪಿಯ ಬಳಿ 49 ಮತಗಳು ಉಳಿಯುತ್ತವೆ. ಎಲ್ಲಾ 3 ಸೀಟು ಗೆಲ್ಲಲು ಪಕ್ಷಕ್ಕೆ ಇನ್ನೂ 19 ಮತಗಳು ಬೇಕು.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಾಯಕರಲ್ಲಿ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸಹ ಒಬ್ಬರು. ಆದರೆ ಅವರನ್ನು ಕಾಂಗ್ರೆಸ್ ಮರು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಕಾಂಗ್ರೆಸ್ ಶಾಸಕರು ಈ ಬಾರಿ ಅಡ್ಡ ಮತದಾನ ಮಾಡಲಿದ್ದಾರೆ ಎಂಬುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆದ್ದರಿಂದ ಹೇಮಂತ್ ಕಟಾರೆ ರಾಜೀನಾಮೆಯನ್ನು ರಾಜ್ಯಸಭೆ ಚುನಾವಣೆಗೆ ತಾಳೆ ಹಾಕಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಒಂದು ಸೀಟು ಗೆಲ್ಲುವಷ್ಟು ಶಾಸಕರ ಬಲ ಹೊಂದಿದೆ. ಆದರೆ ಶಾಸಕರು ಅಡ್ಡ ಮತದಾನ ಮಾಡಿದರೆ 3ನೇ ಸೀಟು ಸಹ ಬಿಜೆಪಿ ಪಾಲಾಗಲಿದೆ.

