ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದಲ್ಲಿ ಕಾವೇರಿ ಕ್ವಾರಿಯಲ್ಲಿ ಕಲ್ಲುಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ವಾರಿ ಇನ್‌ಚಾರ್ಜ್ ಲೋಕೇಶ್ ಮತ್ತು ಲೋಕಲ್ ಇನ್‌ಚಾರ್ಜ್ ರಾಜು ಬಂಧಿತರು. ಬಸವೇಶ್ವರ ಕ್ರಷರ್ ಅನ್ನು ಲೀಸ್‌ಗೆ ಪಡೆದಿದ್ದ ಪಾಂಡುರಂಗ ಸೇರಿದಂತೆ ಮೂವರನ್ನು ತನಿಖೆಗೆ ಒಳಪಡಿಸಲಾಗಿದೆ.
ಕಾರ್ಮಿಕ ಗೋಪಿಕೃಷ್ಣನ್ ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಾಗಿತ್ತು. ಆದರೆ, ಕಾವೇರಿ ಕ್ರಷರ್ ಮಾಲೀಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲೀಕ ಡಿ.ಆನಂದಸ್ವಾಮಿ ಇನ್ನೂ ಬಂಧನವಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಾದಪಟ್ಟಣ ಗ್ರಾಮದ ಬಳಿಯ ಕಾವೇರಿ ಕ್ರಷರ್‌ನಲ್ಲಿ ನಡೆದ ದುರಂತದಲ್ಲಿ 7 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗಿನ ಜಾವ ಕಾರ್ಮಿಕರು ಕೆಲಸ ಮಾಡುತ್ತಿದ ವೇಳೆ ಏಕಾಏಕಿ ಬಂಡೆ ಕುಸಿದ ಪರಿಣಾಮ ಅವಶೇಷಗಳಡಿ ಕಾರ್ಮಿಕರು ಸಿಲುಕಿ ಏಳು ಜನರು ಸಾವನ್ನಪ್ಪಿದ್ದಾರೆ.
ಅವಘಡದಲ್ಲಿ ಮೃತಪಟ್ಟವರನ್ನು ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಎಂದು ಗುರುತಿಸಲಾಗಿದೆ.
ದುರಂತದಲ್ಲಿ ಉತ್ತರ ಭಾರತದ ನಾಲ್ವರು, ಕರ್ನಾಟಕದ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಾದ ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್ (30) ಅವರನ್ನು ಮೈಸೂರು ರಸ್ತೆಯಲ್ಲಿರುವ ಆರ್.ಆರ್.ಆಸ್ಪತ್ರೆಗೆ ದಾಖಲಸಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಓರ್ವ ಕೂಲಿ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಬಂಡೆ ಬಿದ್ದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದರೆ, ಮೂರು ಟ್ಯಾಕ್ಟರ್ಳು ಸಂಪೂರ್ಣ ಜಖಂಗೊಂಡಿವೆ.
ಘಟನಾ ಸ್ಥಳಕ್ಕೆ ಭೇಟಿ ಬಳಿಕ ಮಾತನಾಡಿರುವ ಕೇಂದ್ರ ವಲಯ ಐಜಿಪಿ ಎಸ್.ಗಿರೀಶ್, ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆ ಇದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡ್ತಿದ್ದರು. ಬಂಡೆ ಬಿದ್ದು 16 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

