ದಾವಣಗೆರೆ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದನ್ನು ನೆನೆದು ಸಿದ್ದರಾಮಯ್ಯ ಸಂಪುಟದಲ್ಲಿದ್ದ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಕಣ್ಣೀರುಹಾಕಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸುಧಾಕರ್, ಉಪಹಾರ ಕೂಟದಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದಂತೆ ಎಲ್ಲರೂ ತುಂಬಾ ಭಾವುಕರಾದೆವು. ಸಿದ್ದರಾಮಯ್ಯವರನ್ನು ಕಳೆದ ಎರಡು ಮೂರು ದಿನಗಳಿಂದ ನೋಡಲಾಗುತ್ತಿರಲಿಲ್ಲ ಎಂದು ಗಳ ಗಳನೆ ಅತ್ತಿದ್ದಾರೆ.
ಬ್ರೇಕ್ ಫಾಸ್ಟ್ ಸಭೆಯಲ್ಲಿ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿದರು. ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಘೋಷಿಸಿ, ಅವರಿಗೆ ಸಹಕಾರ ನೀಡುವಂತೆ ಸಚಿವರಲ್ಲಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.
ಸಿದ್ದರಾಮಯ್ಯ ರಾಜೀನಾಮೆ ಘೋಷಣೆ ಕೇಳಿ ಸಭೆಯಲ್ಲಿ ಎಲ್ಲರೂ ಭಾವುಕರಾದರು. ಎಲ್ಲಾ ವರ್ಗಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗಿ, ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಸಮುದಾಯಕ್ಕೆ ಸಮಾನತೆ ನೀಡಿದ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯನವರು. ಆದರೆ ಅಂತಹ ವ್ಯಕ್ತಿ ಇಂದು ರಾಜೀನಾಮೆ ನೀಡುತ್ತಿರುವ ಸಂದರ್ಭ ತುಂಬಾ ಬೇಸರದ ಸಂಗತಿ ಎಂದು ಕಣ್ಣೀರಾದರು.
ಅಧಿಕಾರ ಎಂಬುದು ಯಾರಿಗೂ ಶಾಶ್ವತ ಅಲ್ಲ. ಆದರೂ ಇದು ತುಂಬಾ ನೋವಿನ ಸಂದರ್ಭ ಎಂದರು. ರಾಜಕಾರಣದಲ್ಲಿ ಮೇಲ್ಫಂಥಿಯನ್ನು ಹಾಕಿಕೊಟ್ಟಿದ್ದರು. ಒಬ್ಬ ರಾಜಕಾರಣಿಯ ವ್ಯಕ್ತಿತ್ವ ಹೇಗೆ ಇರುತ್ತೆ ಎನ್ನುವುದನ್ನು ಸಿದ್ದರಾಮಯ್ಯ ತಿಳಿಸಿಕೊಟ್ಟಿದ್ದರು. ಅಲ್ಲದೇ ಇದರಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕೂಡ ಸಾಕಷ್ಟು ವೃದ್ಧಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಅವರ ಅನುಭವ ನಮಗೆಲ್ಲ ಪಾಠ ಹೇಳಿದೆ. ನಾಳೆ ಸಭೆ ನಡೆಯಲಿದೆ, ಸಮಯ ಹಾಗೂ ಸ್ಥಳ ನಿಗದಿಯಾಗಿಲ್ಲ. ಶಾಸಕಾಂಗದ ಸಭೆಯಾದ ಬಳಿಕ ಅಧಿಕೃತವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಆಗಿ ಘೋಷೊಸಲಾಗುವುದು. ಡಿಕೆಶಿಯವರು ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ ಅತಂಕವಿಲ್ಲ ಎಂದರು.

