ಲಕ್ನೋದ ಪ್ರತಿಷ್ಠಿತ ಸಲೂನ್ ಒಂದರಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಇಬ್ಬರು ಮಹಿಳೆಯರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಕಪ್ಪು ಬಣ್ಣದ ಟಾಪ್ ಧರಿಸಿದ್ದ ಮಹಿಳೆ ಮತ್ತು ಮತ್ತೊಬ್ಬ ಮಹಿಳೆ ನಡುವಿನ ವಾಗ್ವಾದ ಸಣ್ಣದಾಗಿ ಶುರುವಾಗಿ, ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ಹೋಗಿದೆ. ಜಗಳ ಎಷ್ಟು ತೀವ್ರವಾಗಿತ್ತೆಂದರೆ ಇಬ್ಬರೂ ಪರಸ್ಪರ ಕೂದಲು ಹಿಡಿದು ಎಳೆದಾಡುತ್ತಾ ಹೊಡೆದಾಡಿಕೊಂಡಿದ್ದಾರೆ.
ಬಿಡಿಸಲು ಹೋದ ಸಿಬ್ಬಂದಿ ಹೈರಾಣು
ಜಗಳ ಜೋರಾಗುತ್ತಿದ್ದಂತೆ ಅಲ್ಲಿದ್ದ ಹಳದಿ ಟೀ ಶರ್ಟ್ ಧರಿಸಿದ್ದ ಸಲೂನ್ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದರೂ, ಮಹಿಳೆಯರು ಮಾತ್ರ ಒಬ್ಬರನ್ನೊಬ್ಬರು ಬಿಡದೆ ಆಕ್ರೋಶ ಹೊರಹಾಕುತ್ತಿದ್ದರು. ಸಲೂನ್ ಸಿಬ್ಬಂದಿ ಇಬ್ಬರ ನಡುವೆ ಸಿಕ್ಕಿಹಾಕಿಕೊಂಡು ಅವರನ್ನು ಸಮಾಧಾನಪಡಿಸಲು ಪರದಾಡುವ ದೃಶ್ಯ ವಿಡಿಯೋದಲ್ಲಿದೆ.
ಮೂಕಪ್ರೇಕ್ಷಕರಾದ ಗ್ರಾಹಕರು
ಈ ಭೀಕರ ಜಗಳ ಮಂಟಪದಂತಾದ ಸಲೂನ್ನಲ್ಲಿ ಇತರ ಗ್ರಾಹಕರು ಮಾತ್ರ ಏನೂ ಆಗದಂತೆ ಕುಳಿತಿರುವುದು ಅಚ್ಚರಿ ಮೂಡಿಸಿದೆ. ಜಗಳ ನಡೆಯುತ್ತಿದ್ದರೂ ಅಲ್ಲಿನ ಕೆಲವರು ಕಣ್ಣೆತ್ತಿ ನೋಡದೆ ತಮ್ಮ ಪಾಡಿಗೆ ತಾವು ಮೊಬೈಲ್ ಬಳಸುತ್ತಾ ಕುಳಿತಿದ್ದರೆ, ಇನ್ನು ಕೆಲವರು ಶಾಂತವಾಗಿ ಜಗಳವನ್ನು ವೀಕ್ಷಿಸುತ್ತಿದ್ದರು. ಯಾರೂ ಕೂಡ ಸಿಬ್ಬಂದಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಸುಮಾರು ನಾಲ್ಕು ನಿಮಿಷಗಳ ಕಾಲ ನಡೆದ ಈ ಹೈಡ್ರಾಮಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಈಡಾಗಿದೆ. ಕೆಲವರು ಈ ದೃಶ್ಯ ನೋಡಿ ತಮಾಷೆ ಮಾಡುತ್ತಿದ್ದರೆ, ಇನ್ನು ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಈ ರೀತಿಯ ವರ್ತನೆ ಅಸಭ್ಯವಾದುದು ಎಂದು ಟೀಕಿಸಿದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಬರುವ ಜಾಗದಲ್ಲಿ ಇಂತಹ ವಿಕಾರ ಪ್ರದರ್ಶನ ಬೇಕಿತ್ತೇ ಎಂದು ಅನೇಕರು ಪ್ರಶ್ನಿಸಿದ್ದಾರೆ.

