ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಪ್ರೇಕ್ಷಕರು ಯಾವಾಗಲೂ ಕೈಹಿಡಿಯುತ್ತಾರೆ ಎಂಬುದಕ್ಕೆ ಇತ್ತೀಚೆಗಷ್ಟೇ ತೆರೆಕಂಡ ಹೊಸ ಚಿತ್ರವೊಂದು ಸಾಕ್ಷಿಯಾಗಿದೆ. ಜುಲೈ ಮೂರರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ‘ಲವ್ ಸೀಸನ್ಸ್’ ಸಿನಿಮಾ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶಿಷ್ಟ ಪ್ರೇಮಕಥೆಯನ್ನೊಳಗೊಂಡ ಈ ಚಿತ್ರವು ಯುವ ಪೀಳಿಗೆ ಹಾಗೂ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರವನ್ನು ಎನ್ ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎನ್ ಆರ್ ಮಂಜುನಾಥ್ (ನೀಲೇರಿ) ಅವರು ಅತ್ಯಂತ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಬರೆದು ಕೃತ್ವಿಕ್ ಅವರು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಪ್ರೇಮಕಥೆಯನ್ನು ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಪ್ರಮುಖ ಪ್ಲಸ್ ಪಾಯಿಂಟ್ ಆಗಿದ್ದು, ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿವೆ. ಇನ್ನು ಮಧು ತುಂಬಕೆರೆ ಅವರ ಸಂಕಲನ ಚಿತ್ರದ ಓಟಕ್ಕೆ ಪೂರಕವಾಗಿದೆ.
ಚಿತ್ರದ ತಾರಾಗಣದಲ್ಲಿ ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ ಮತ್ತು ಚಂದನಾ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಇವರೊಂದಿಗೆ ಶ್ವೇತಾ ಕೋಗ್ಲೂರ್, ಹಿರಿಯ ಕಲಾವಿದರಾದ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತ ಅನಿಲ್, ಜಯತೀರ್ಥ, ಚೇತನ್ ದುರ್ಗಾ, ಹುಲಿ ಕಾರ್ತಿಕ್ ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ಸದಾನಂದ್ ಹಾಗೂ ಬೇಬಿ ರಿತು ಸಿಂಗ್ ಚಿತ್ರದ ಉಳಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಚಿತ್ರದ ನೃತ್ಯ ಸಂಯೋಜನೆಯನ್ನು ಭಜರಂಗಿ ಮೋಹನ್ ನಿಭಾಯಿಸಿದ್ದರೆ, ಸಾಹಸ ದೃಶ್ಯಗಳನ್ನು ರವಿಕುಮಾರ್ ಲೀ ಅವರು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾರೆ. ಟಾಮ್ ಸಿ ಜೋಸೆಫ್ ಅವರ ಕಲರ್ ಗ್ರೇಡಿಂಗ್ ಚಿತ್ರದ ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಒಟ್ಟಾರೆಯಾಗಿ ತಾಂತ್ರಿಕವಾಗಿ ಮತ್ತು ನಟನೆಯ ದೃಷ್ಟಿಯಿಂದ ಶ್ರೀಮಂತವಾಗಿ ಮೂಡಿಬಂದಿರುವ ‘ಲವ್ ಸೀಸನ್ಸ್’ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿಪ್ರೇಮಿಗಳ ಮೆಚ್ಚಿನ ಆಯ್ಕೆಯಾಗಿದೆ.

