ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಥಾಣೆ, ಮುಂಬೈ, ಪುಣೆ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಈ ಮಳೆಯಿಂದಾಗಿ ಸುಮಾರು 10 ಮಂದಿ ಮೃತಪಟ್ಟಿದ್ದು, ಕೆಲವೆಡೆ ಭೂಕುಸಿತದಂತಹ ದುರ್ಘಟನೆಗಳೂ ಸಂಭವಿಸಿವೆ.
ಮತ್ತೊಂದೆಡೆ, ನಿರಂತರ ಮಳೆಯಿಂದ ರಸ್ತೆಗಳು ಕೆರೆಗಳಂತಾಗಿದ್ದು, ಜನರು ಮನೆಯಿಂದ ಹೊರಬರಲು ಸಹ ಕಷ್ಟಪಡುತ್ತಿದ್ದಾರೆ. ಥಾಣೆ ಜಿಲ್ಲೆಯ ಭಿವಂಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸ್ಥಳೀಯ ಯುವಕನೊಬ್ಬ ಮಾಡಿದ ಮಾನವೀಯ ಕಾರ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸ್ಪೈಡರ್ಮ್ಯಾನ್ ವೇಷ ತೊಟ್ಟು ಜನರಿಗೆ ನೆರವಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಿವಂಡಿಯ ಅನೇಕ ರಸ್ತೆಗಳಲ್ಲಿ ಮೊಣಕಾಲಿನಷ್ಟು ನೀರು ನಿಂತಿದ್ದು, ದೊಡ್ಡ ದೊಡ್ಡ ಗುಂಡಿಗಳು ನೀರಿನಿಂದ ಮುಚ್ಚಿಕೊಂಡಿವೆ. ಇದರಿಂದ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕ ಶಾದಾಬ್ ಮೊಮಿನ್ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾನೆ.
‘ಫ್ರೆಂಡ್ಲಿ ಸ್ಪೈಡರ್ಮ್ಯಾನ್‘ ಎಂಬ ಹೆಸರಿನಲ್ಲಿ ಸ್ಪೈಡರ್ಮ್ಯಾನ್ ವೇಷ ಧರಿಸಿ ರಸ್ತೆಯಲ್ಲಿ ನಿಂತು, ವಾಹನ ಸವಾರರಿಗೆ ಸುರಕ್ಷಿತ ಮಾರ್ಗ ತೋರಿಸುತ್ತಿದ್ದಾನೆ. ಗುಂಡಿಗಳಲ್ಲಿ ಸಿಲುಕಿದ ವಾಹನಗಳನ್ನು ತಳ್ಳಿಕೊಂಡು ಹೋಗಲು ಸಹಾಯ ಮಾಡುತ್ತಿದ್ದು, ಯಾರಿಗೂ ಅಪಾಯವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾನೆ. ಸ್ಪೈಡರ್ಮ್ಯಾನ್ ಮಕ್ಕಳ ನೆಚ್ಚಿನ ಸೂಪರ್ ಹೀರೋ ಆಗಿರುವುದರಿಂದ, ರಸ್ತೆಯಲ್ಲಿ ಹೋಗುವ ಮಕ್ಕಳು ಅವನ ಬಳಿ ಸಂತೋಷದಿಂದ ಓಡಿ ಬರುತ್ತಿದ್ದಾರೆ. ಅವರಿಗೆ ತನ್ನ ಭುಜದ ಮೇಲೆ ಕೂರಿಸಿ ರಸ್ತೆ ದಾಟಿಸುವ ಮೂಲಕವೂ ಮಾನವೀಯತೆ ಮೆರೆದಿದ್ದಾನೆ.
ಈ ಕಾರ್ಯದಿಂದ ಸಂತುಷ್ಟರಾದ ಸ್ಥಳೀಯರು ಶಾದಾಬ್ ಮೊಮಿನ್ ಅವರನ್ನು ‘ಭಿವಂಡಿ ಸ್ಪೈಡರ್ಮ್ಯಾನ್’ ಎಂದು ಕರೆಯಲು ಆರಂಭಿಸಿದ್ದಾರೆ. ಜೊತೆಗೆ ಸ್ಪೈಡರ್ಮ್ಯಾನ್ ಶೈಲಿಯ ವಿವಿಧ ಸಾಹಸ ಭಂಗಿಗಳ ಮೂಲಕ ಜನರನ್ನೂ ರಂಜಿಸುತ್ತಿದ್ದಾನೆ. ಕೆಲ ಯುವಕರು ಅವನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವು ಈಗ ಭಾರೀ ವೈರಲ್ ಆಗಿವೆ.
ಶಾದಾಬ್ ಮೊಮಿನ್ ಅವರ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಯುವಕರು ಇದೇ ರೀತಿ ಸಮಾಜ ಸೇವೆಗೆ ಮುಂದಾಗಬೇಕು ಎಂದು ಪ್ರಶಂಸಿಸುತ್ತಿದ್ದಾರೆ.

