ರೈಲು ಹಳಿಗಳ ಮೇಲೆ ವೇಗವಾಗಿ ಸಾಗುತ್ತಿರುವ ರೈಲನ್ನು ಕಂಡರೆ ಅದರೊಳಗೆ ಚಾಲಕನಿರುತ್ತಾನೆ, ಮುಂದೆ ಇಂಜಿನ್ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇಂಜಿನ್ ಇಲ್ಲ, ಚಾಲಕನೂ ಇಲ್ಲ.. ಆದರೂ ಏಳು ರೈಲು ಬೋಗಿಗಳು ಬರೋಬ್ಬರಿ ಆರು ಕಿಲೋಮೀಟರ್ ದೂರ ಚಲಿಸಿದರೆ ಹೇಗಿರುತ್ತದೆ? ಇಂತಹ ಅಚ್ಚರಿಯ ಜೊತೆಗೆ ಆತಂಕ ಮೂಡಿಸುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ತಿರುಪತ್ತೂರು ಜಿಲ್ಲೆಯ ಪ್ರಸಿದ್ಧ ಜೋಲಾರ್‌ಪೇಟೆ ರೈಲು ಜಂಕ್ಷನ್‌ನಲ್ಲಿ ಇಂಜಿನ್ ಇಲ್ಲದ ಏಳು ಖಾಲಿ ರೈಲು ಬೋಗಿಗಳು ತಾವಾಗಿಯೇ ಚಲಿಸಿ ಮುಖ್ಯ ರೈಲು ಮಾರ್ಗಕ್ಕೆ ಪ್ರವೇಶಿಸಿವೆ. ಸುಮಾರು ಆರು ಕಿಲೋಮೀಟರ್ ದೂರ ಸಾಗಿದ ಈ ಬೋಗಿಗಳು ಕೊನೆಗೆ ತಮಲೇರಿ ಮುತ್ತೂರು ಸಮೀಪ ಹಳಿ ತಪ್ಪಿ ನಿಂತಿವೆ. ಅದೃಷ್ಟವಶಾತ್, ಈ ಘಟನೆ ಸಂಭವಿಸಿದಾಗ ಅದೇ ಮಾರ್ಗದಲ್ಲಿ ಇತರೆ ರೈಲುಗಳು ಸಂಚರಿಸುತ್ತಿದ್ದರೂ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ರೈಲ್ವೆ ನಿರ್ವಹಣಾ ವಿಭಾಗದ ನಿರ್ಲಕ್ಷ್ಯದಿಂದ ಭಾರೀ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಪ್ರಸಿದ್ಧ ಜೋಲಾರ್‌ಪೇಟೆ ರೈಲು ಜಂಕ್ಷನ್‌ನಲ್ಲಿ ಇಂಜಿನ್ ಇಲ್ಲದ ಏಳು ಖಾಲಿ ರೈಲು ಬೋಗಿಗಳು ತಾವಾಗಿಯೇ ಹಳಿ ಮೇಲೆ ಚಲಿಸಿದ ಘಟನೆ ಆತಂಕ ಮೂಡಿಸಿದೆ.
ಯಾವುದೇ ಚಾಲಕ ಅಥವಾ ಇಂಜಿನ್ ಇಲ್ಲದೆ ಚಲಿಸಿದ ಈ ಏಳು ಬೋಗಿಗಳು ಮುಖ್ಯ ರೈಲು ಮಾರ್ಗ ಪ್ರವೇಶಿಸಿ ಸುಮಾರು ಆರು ಕಿಲೋಮೀಟರ್ ದೂರ ಸಾಗಿವೆ. ಕೊನೆಗೆ ತಮಲೇರಿ ಮುತ್ತೂರು ಸಮೀಪ ಹಳಿ ತಪ್ಪಿ ನಿಂತಿವೆ.
ಅಸಲಿಗೆ ನಡೆದಿದ್ದೇನು?
ರೈಲ್ವೆ ಯಾರ್ಡ್‌ನಲ್ಲಿ ದುರಸ್ತಿ ಕಾರ್ಯಕ್ಕಾಗಿ ಈ ಏಳು ಬೋಗಿಗಳನ್ನು ನಿಲ್ಲಿಸಲಾಗಿತ್ತು. ಇವುಗಳನ್ನು ಇಂಜಿನ್ ಸಹಾಯದಿಂದ ಮುಂದೆ ಸಾಗಿಸಲಾಗಿತ್ತು. ಆದರೆ ಬೋಗಿಗಳು ಚಲಿಸದಂತೆ ಚಕ್ರಗಳಿಗೆ ಸರಿಯಾಗಿ ಹ್ಯಾಂಡ್‌ಬ್ರೇಕ್ ಅಥವಾ ಸ್ಟಾಪರ್‌ಗಳನ್ನು ಅಳವಡಿಸಿರಲಿಲ್ಲ ಎನ್ನಲಾಗಿದೆ.
ಇದರಿಂದ ಬೋಗಿಗಳು ನಿಯಂತ್ರಣ ತಪ್ಪಿ ವೇಗ ಪಡೆದುಕೊಂಡು ಯಾರ್ಡ್‌ನಿಂದ ಹೊರಬಂದು ಮುಖ್ಯ ರೈಲು ಮಾರ್ಗಕ್ಕೆ ಪ್ರವೇಶಿಸಿವೆ. ರೈಲ್ವೆ ಸಿಬ್ಬಂದಿಯ ಈ ನಿರ್ಲಕ್ಷ್ಯದಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಆಪತ್ಕಾಲದಲ್ಲಿ ದೇವರಂತೆ ಬಂದ ಗೇಟ್‌ಮ್ಯಾನ್!
ಈ ಘಟನೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಸಮೀಪದಲ್ಲಿದ್ದ ಗೇಟ್‌ಕೀಪರ್ ಅವರ ಸಮಯಪ್ರಜ್ಞೆ. ಇಂಜಿನ್ ಇಲ್ಲದ ಏಳು ಬೋಗಿಗಳು ವೇಗವಾಗಿ ಹಳಿ ಮೇಲೆ ಬರುತ್ತಿರುವುದನ್ನು ಗಮನಿಸಿದ ಅವರು ಕ್ಷಣವೂ ತಡಮಾಡದೆ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಎಚ್ಚೆತ್ತ ಅಧಿಕಾರಿಗಳು ಕರ್ನಾಟಕ-ಬೆಂಗಳೂರು ಕಡೆಯಿಂದ ಜೋಲಾರ್‌ಪೇಟೆ ಮಾರ್ಗವಾಗಿ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲುಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಾರೆ. ಒಂದು ವೇಳೆ ಗೇಟ್‌ಕೀಪರ್ ಈ ಅಪಾಯವನ್ನು ಗುರುತಿಸಿ ಮಾಹಿತಿ ನೀಡದಿದ್ದರೆ, ವೇಗವಾಗಿ ಬರುತ್ತಿದ್ದ ರೈಲುಗಳೊಂದಿಗೆ ಈ ಬೋಗಿಗಳು ಡಿಕ್ಕಿಯಾಗುವ ಸಾಧ್ಯತೆಯಿತ್ತು. ಅವರ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾಗಿದ್ದ ಭೀಕರ ರೈಲು ದುರಂತ ತಪ್ಪಿದೆ.
ಗ್ಯಾಸ್ ಕಟರ್, ಜೆಸಿಬಿ ಮೂಲಕ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗ್ಯಾಸ್ ಕಟರ್‌ಗಳ ನೆರವಿನಿಂದ ಬೋಗಿಗಳನ್ನು ಪ್ರತ್ಯೇಕಿಸಿ, ಜೆಸಿಬಿ ಯಂತ್ರಗಳ ಸಹಾಯದಿಂದ ಹಳಿಯಿಂದ ತೆರವುಗೊಳಿಸಲಾಗಿದೆ.
ಆದರೆ ಈ ಘಟನೆಯಿಂದ ಬೆಂಗಳೂರು-ಚೆನ್ನೈ ಪ್ರಮುಖ ರೈಲು ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಹಲವು ರೈಲುಗಳು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿವೆ.ಅದೃಷ್ಟವಶಾತ್, ಒಬ್ಬ ಗೇಟ್‌ಮ್ಯಾನ್‌ನ ಸಮಯಪ್ರಜ್ಞೆ ನೂರಾರು ಪ್ರಯಾಣಿಕರ ಜೀವಕ್ಕೆ ಎದುರಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದೆ.

