ಸಿದ್ದರಾಮನಹುಂಡಿಯಿಂದ ವಿಧಾನಸೌಧ ತನಕ…ಕುರಿ ಕಾಯುವುದರಿಂದ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸುವ ದಾಖಲೆ ತನಕ ಸಿದ್ದರಾಮಯ್ಯ ರಾಜಕೀಯವಾಗಿ ಅನೇಕ ಏಳು-ಬೀಳು ಕಂಡಿದ್ದಾರೆ. ಜನವರಿ 6, 2026ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದಾರೆ.
7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಮೂಲಕ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ದಾಖಲೆಯನ್ನು ಮುರಿದಿದ್ದಾರೆ. ತಾಲ್ಲೂಕು ಬೋರ್ಡ್ ಸದಸ್ಯತ್ವದಿಂದ ಮುಖ್ಯಮಂತ್ರಿ ಹುದ್ದೆಯ ತನಕ ಸಿದ್ದರಾಮಯ್ಯ ರಾಜಕೀಯ ಜೀವನದ ನೋಟ ಇಲ್ಲಿದೆ.
“ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ. ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 9 ಬಾರಿ ಗೆಲುವು ಸಾಧಿಸಿದ್ದೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಮುಂದೆ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು” ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಜೀವನ
- 1978 ಮೈಸೂರು ತಾಲೂಕು ಅಭಿವೃದ್ಧಿ ಬೋರ್ಡ್ ಸದಸ್ಯತ್ವದ ಮೂಲಕ ರಾಜಕೀಯ ಜೀವನ ಆರಂಭ
- 1980ರಲ್ಲಿ ಮೈಸೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ, ಸೋಲು
- 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆಲುವು
- 1985ರಲ್ಲಿ ಜನತಾ ಪಕ್ಷ ಸೇರ್ಪಡೆ, 2ನೇ ಬಾರಿ ಶಾಸಕರಾಗಿ ಆಯ್ಕೆ, ಸಚಿವ ಸ್ಥಾನ
- 1988 ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರು
- 1989 ವಿಧಾನಸಭೆ ಚುನಾವಣೆಯಲ್ಲಿ ಸೋಲು
- 1991 ಕೊಪ್ಪಳದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ, ಸೋಲು
- 1994 ಜನತಾದಳದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲವು
- ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಸಂಪುಟದಲ್ಲಿ ಹಣಕಾಸು ಖಾತೆ
- 1996 ಜೆ.ಎಚ್.ಪಟೇಲ್ ಸಂಪುಟದಲ್ಲಿ ಉಪಮುಖ್ಯಮಂತ್ರಿ
- 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋಲು
- 2004 ಚುನಾವಣೆಯಲ್ಲಿ ಗೆಲುವು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಸಿಎಂ
- 2004ರಲ್ಲಿ ಜೆಡಿಎಸ್‌ನಲ್ಲಿ ಅಸಮಾಧಾನ, ಪಕ್ಷದಿಂದ ಉಚ್ಛಾಟನೆ. ಅಹಿಂದ ಸಂಘಟನೆ
- 2006 ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ
- 2006 ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಕೇವಲ 256 ಮತಗಳ ಗೆಲುವು
- 2008-2013 ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಣೆ
- ಬೆಂಗಳೂರು-ಬಳ್ಳಾರಿ ಪಾದಯಾತ್ರೆ, ರಾಜ್ಯ ರಾಜಕೀಯದ ಚಿತ್ರಣವೇ ಬದಲು
- 2013ರಲ್ಲಿ ಕಾಂಗ್ರೆಸ್ ಪರ ರಾಜ್ಯಾದ್ಯಂತ ಪ್ರಚಾರ
- 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ
- 2018ರಲ್ಲಿ ಚಾಮುಂಡೇಶ್ವರಿ, ಬಾದಾಮಿಯಲ್ಲಿ ಚುನಾವಣಾ ಕಣಕ್ಕೆ
- ಚಾಮುಂಡೇಶ್ವರಿಯಲ್ಲಿ 85,283 ಮತಗಳನ್ನು ಪಡೆದು ಸೋಲು
- 67,599 ಮತಗಳನ್ನು ಪಡೆದು ಬಾದಾಮಿಯಲ್ಲಿ ಗೆಲುವು
- ವಿರೋಧ ಪಕ್ಷದ ನಾಯಕರಾಗಿ ಆಯ್ಕೆ
- 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ
- 2023ರ ಮೇ ತಿಂಗಳಿನಲ್ಲಿ 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ
ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ, 17 ಬಾರಿ ಬಜೆಟ್ ಮಂಡಿಸಿದರೂ ಸಿದ್ದರಾಮಯ್ಯ ಎಂದೂ ಸಹ ರಾಷ್ಟ್ರ ರಾಜಕೀಯದತ್ತ ಮುಖ ಮಾಡಿಲ್ಲ. ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತ ಕರ್ನಾಟಕದ ಪ್ರಭಾವಿ ರಾಜಕೀಯ ನಾಯಕ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿಯೇ ಉಳಿದರು.
ನವೆಂಬರ್ 20, 2025ಕ್ಕೆ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರ್ಣಗೊಳಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗದಿದ್ದರೆ ಸಿದ್ದರಾಮಯ್ಯ 2ನೇ ಅವಧಿಯಲ್ಲಿಯೂ 5 ವರ್ಷ ಪೂರ್ಣಗೊಳಿಸಿ ಮತ್ತೊಂದು ದಾಖಲೆಯನ್ನು ಬರೆಯಲಿದ್ದಾರೆ.

