ಮಂಗಳವಾರ ಮುಂಜಾನೆ ಬೆಂಗಳೂರು ನಗರದ ಹಲವು ಮಹಿಳೆಯರು ಗಡಿಬಿಡಿಯಲ್ಲಿದ್ದರು. ಮಕ್ಕಳನ್ನು ಶಾಲೆಗೆ, ಆಫೀಸಿಗೆ ಕಳಿಸುವ, ಗಂಡನನ್ನು ಕಚೇರಿಗೆ ಕಳಿಸಲು ಅಲ್ಲ. ಸೀರೆ ಕೊಳ್ಳಲು. ಹೌದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಮಂಗಳವಾರ ಬೆಳಗ್ಗ 4 ಗಂಟೆಗೆ ನಗರದ ಬಹುತೇಕ ಜನರು ಸಿಹಿ ನಿದ್ದೆಯಲ್ಲಿದ್ದಾಗ ಕೆಎಸ್‌ಐಸಿ ಮಳಿಗೆಯ ಹೊರಗೆ ದೊಡ್ಡ ಸಾಲು ಇತ್ತು. ಸೂರ್ಯೋದಯವಾಗಿ ಅಂಗಡಿ ಬಾಗಿಲು ತೆರೆಯಲು ಇನ್ನೂ ಬಹಳ ಸಮಯವಿತ್ತು. ಆದರೆ ಕ್ಯೂ ಬೆಳೆಯುತ್ತಲೇ ಹೋಗಿತ್ತು.
ಸರದಿಗಾಗಿ ಕಾಯುತ್ತಿದ್ದ ಮಹಿಳೆಯರು ಹ್ಯಾಂಡ್‌ಬ್ಯಾಗ್ ಹಿಡಿದು ಫೋನ್ ನೋಡುತ್ತಾ, ಅಕ್ಕಪಕ್ಕದವರ ಜೊತೆ ಮಾತನಾಡುತ್ತಾ ನಿಂತಿದ್ದರು. ಅಲ್ಲಿ ಅಷ್ಟು ಜನರು ಜಮಾವಣೆಗೊಳ್ಳಲು ಕಾರಣ ಕರ್ನಾಟಕದ ಹೆಮ್ಮೆಯ ಮೈಸೂರು ರೇಷ್ಮೆ ಸೀರೆ.
ತಮ್ಮ ಗುಣಮಟ್ಟ ಮತ್ತು ಕರಕುಶಲತೆಗೆ ಹೆಸರಾದ ಮೈಸೂರು ರೇಷ್ಮೆ ಸೀರೆಗಳ ಬೆಲೆ ಕಡಿಮೆ ಏನಿಲ್ಲ. 23,000 ರೂಪಾಯಿಗಳಿಂದ 2.5 ಲಕ್ಷ ರೂಪಾಯಿಗಳವರೆಗೆ ಸೀರೆಗೆ ದರವಿದೆ. ಕೆಎಸ್‌ಐಸಿ ಮಳಿಗೆಯ ಹೊರಗೆ ಮುಂಜಾನೆಯೇ ಸೀರೆ ಕೊಳ್ಳಲು ಜನರ ಸಾಲುನೋಡಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಅದು ವೈರಲ್ ಆಗಿದೆ.
ರೇಷ್ಮೆ ಸೀರೆಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಎಸ್‌ಐಸಿ ತನ್ನ ಖರೀದಿ ಪ್ರಕ್ರಿಯೆ ನಿಯಮವನ್ನು ಬಿಗಿಗೊಳಿಸಿದೆ. ‘ಕನ್ನಡ ಪ್ರಭ’ ವರದಿಯ ಪ್ರಕಾರ ಜನಸಂದಣಿಯನ್ನು ನಿಯಂತ್ರಿಸಲು ನಿಗಮವು ಕಟ್ಟುನಿಟ್ಟಾದ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಟೋಕನ್ ಇರುವ ಗ್ರಾಹಕರಿಗೆ ಮಾತ್ರ ಮಳಿಗೆಯ ಒಳಗೆ ಪ್ರವೇಶ ನೀಡಲಾಗುತ್ತಿದ್ದು, ಪ್ರತಿ ಖರೀದಿದಾರರಿಗೆ ಕೇವಲ ಒಂದು ಸೀರೆ ಖರೀದಿಸಲು ಮಾತ್ರ ಅವಕಾಶವಿದೆ.
ಮೈಸೂರು ರೇಷ್ಮೆ ಸೀರೆಗಳ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಸೀರೆಗಳು ಸಮಾನವಾಗಿ ಸಿಗುವಂತೆ ಮಾಡಲು, ಅಕ್ರಮ ದಾಸ್ತಾನನ್ನು ತಡೆಯಲು ಮತ್ತು ಖರೀದಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ಬಳಕೆದಾರೊಬ್ಬರು, “ಇದು ಭಾರತದಲ್ಲಿರುವ ಆಪಲ್ ಸ್ಟೋರ್ ಅಲ್ಲ, ಕರ್ನಾಟಕದ ಸರ್ಕಾರಿ ಸೀರೆ ಮಳಿಗೆ. ಒಳಗೆ ಹೋಗಲು ನಿಮಗೆ ಟೋಕನ್ ಬೇಕು ಮತ್ತು ಒಬ್ಬ ಗ್ರಾಹಕರಿಗೆ ಒಂದೇ ಸೀರೆ ಮಾತ್ರ ಲಭ್ಯ” ಎಂದು ಹೇಳಿದ್ದಾರೆ.
ಮೈಸೂರು ರೇಷ್ಮೆ ಸೀರೆಗಳ ಖರೀದಿಗೆ ಜನರ ದಂಡು ನೋಡಿ ಒಬ್ಬರು, “ಮೈಸೂರು ಸಿಲ್ಕ್ ಬಗ್ಗೆ ಅನಗತ್ಯವಾಗಿ ಅತಿ ಪ್ರಚಾರ ಮಾಡಲಾಗಿದೆ ಮತ್ತು ಇದು ತುಂಬಾನೇ ದುಬಾರಿ. ಅಸಲಿ ರೇಷ್ಮೆಯೂ ಅಲ್ಲ, ಇದು ಯಂತ್ರಗಳಿಂದ ತಯಾರಿಸಲ್ಪಟ್ಟಿದೆಯೇ ಹೊರತು ಕೈಮಗ್ಗದ್ದಲ್ಲ. ಸಾವಿರಾರು ರೂಪಾಯಿಗಳನ್ನು ನೀಡಿ ಇದನ್ನು ಖರೀದಿಸುವುದು ಖಂಡಿತ ಯೋಗ್ಯವಲ್ಲ. ಇದಕ್ಕಿಂತ ಉತ್ತಮ ಗುಣಮಟ್ಟದ ಅಸಲಿ ಪಟ್ಟು ಸೀರೆಗಳು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸಿಗುತ್ತವೆ” ಎಂದು ಹೇಳಿದ್ದಾರೆ.
ಮೈಸೂರು ರೇಷ್ಮೆ ಸೀರೆಗಳ ವಿಶೇಷತೆಗಳು
- ಮೈಸೂರು ರೇಷ್ಮೆ ಸೀರೆಗಳನ್ನು ಶೇಕಡಾ 100 ರಷ್ಟು ಶುದ್ಧವಾದ ಹಿಪ್ಪುನೇರಳೆ (Mulberry) ರೇಷ್ಮೆಯಿಂದ ತಯಾರಿಸಲಾಗುತ್ತದೆ.
- ಈ ಸೀರೆಗಳ ಬಾರ್ಡರ್ ಮತ್ತು ಸೆರಗು ಅಸಲಿ ಚಿನ್ನ ಮತ್ತು ಬೆಳ್ಳಿಯ ಎಳೆಗಳಿಂದ ಮಾಡಿದ ಜರಿಯನ್ನು ಬಳಸಲಾಗುತ್ತದೆ.
- ಪ್ರತಿಯೊಂದು ಸೀರೆಯನ್ನು ನುರಿತ ಕುಶಲಕರ್ಮಿಗಳು ಅತೀವ ಶ್ರಮದಾಯಕ ತಂತ್ರಗಳನ್ನು ಬಳಸಿ ಸಿದ್ಧಪಡಿಸುತ್ತಾರೆ.
- ಈ ಸೀರೆಗಳು ತಮ್ಮ ವಿಶಿಷ್ಟವಾದ ವಿನ್ಯಾಸ ಮತ್ತು ಉತ್ತಮ ಗುಣಮಟ್ಟದ ಫಿನಿಶಿಂಗ್‌ಗೆ ಹೆಸರುವಾಸಿಯಾಗಿವೆ.
- ನುರಿತ ನೇಯ್ಗೆಯವರ ಕೊರತೆ ಮತ್ತು ಸೀಮಿತ ಉತ್ಪಾದನೆಯು ಇವುಗಳ ಬೆಲೆ ಏರಿಕೆಗೆ ಕಾರಣವಾಗಿದೆ.
- ಈ ಸೀರೆಗಳು ಹೆಚ್ಚಿನ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಯಾವಾಗಲೂ ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತವೆ.

