ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಹೆಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದ್ದು, ರಾಜೀ ಸಂಧಾನದ ಮೂಲಕ ಕೇಸ್ ಇತ್ಯರ್ಥಕ್ಕೆ ಹೈಕೋರ್ಟ್ ಸಲಹೆ ನೀಡಿದ ಹಿನ್ನೆಲೆಯಲ್ಲಿ ಕ್ಷಮೆಯಾಚನೆಯ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಎಡಿಜಿಪಿ ಪರ ವಕೀಲರು ವಾದ ಮಂಡಿಸಿದ್ದಾರೆ. ಇದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಮಸ್ಯೆ ಇತ್ಯರ್ಥಕ್ಕೆ ಮದ್ಯಸ್ಥಿಕೆದಾರರನ್ನು ನೇಮಿಸಲು ಹೈಕೋರ್ಟ್ ಪ್ರಸ್ತಾಪಿಸಿ ಇದರ ಬಗ್ಗೆ ನಿಲುವು ತಿಳಿಸಲು ಎರಡೂ ಕಡೆಯ ವಕೀಲರಿಗೆ ಸೂಚಿಸಿದೆ. ಅರ್ಜಿ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಮಧ್ಯಂತರ ತಡೆಯಾಜ್ಞೆ ವಿಸ್ತರಿಸಲಾಗಿದೆ.
ತಮ್ಮ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ. ನಕಲಿ ವೈದ್ಯಕೀಯ ದಾಖಲೆ ಪಡೆದು ಕರ್ನಾಟಕ ಕೇಡರ್ ಗೆ ಸೇರ್ಪಡೆಯಾಗಿದ್ದಾರೆ. ಲಂಚ ಪಡೆದಿದ್ದಾರ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ ಎಂದು ಸಂಜಯನಗರ ಠಾಣೆಯಲ್ಲಿ ಎಡಿಜಿಪಿ ಎಂ. ಚಂದ್ರಶೇಖರ್ ದೂರು ದಾಖಲಿಸಿದ್ದಾರೆ. ಈ ಪ್ರಕರಣ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

