ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜು ಪಿ.(40) ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನದವರೆಗೆ ತರಗತಿ ನಡೆಸಿದ ಮಂಜು ಅವರಿಗೆ ತಲೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೇಳಿಕೊಂಡ ಅವರು ಉಪನ್ಯಾಸಕರ ಕೊಠಡಿಗೆ ಹೋಗಿ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದಾರೆ. ನಂತರ ಅವರಿಗೆ ವಿಪರೀತ ನೋವು ಕಾಣಿಸಿಕೊಂಡಿದ್ದು, ಸ್ಥಳೀಯ ಮೆಡಿಕಲ್ ಸ್ಟೋರ್ ಗೆ ತೆರಳಿ ಔಷಧ ಖರೀದಿಸಲು ಹೋದಾಗ ಅಲ್ಲೇ ಕುಸಿದು ಬಿದ್ದಿದ್ದಾರೆ. ಮೆಡಿಕಲ್ ಸ್ಟೋರ್ ನವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆಗಾಗಲೇ ಮಂಜು ಮೃತಪಟ್ಟಿದ್ದರು ಎನ್ನಲಾಗಿದೆ.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೈಸೂರು ಕೆಆರ್ ನಗರದ ಬೇರ್ಯ ಮೂಲದ ಮಂಜು ಕೆಆರ್ ನಗರದಲ್ಲಿ ಪ್ರೌಢಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಕೆ-ಸೆಟ್ ಪರೀಕ್ಷೆ ಪಾಸ್ ಆಗಿ 2024ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

