ನವದೆಹಲಿ: ಲೋಕಸಭೆಯಲ್ಲಿ ಫೆಬ್ರವರಿ 4ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ವಿಪಕ್ಷದ ಸಂಸದರು ತೋರಿದ ಅಶಿಸ್ತು, ಗದ್ದಲ-ಕೋಲಾಹಲ ಹಾಗೂ ಸದನದ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ನಡುವೆ ವಿಪಕ್ಷಗಳ ಮಹಿಳಾ ಸಂಸದರ ಬಳಿಕ ಈಗ ಬಿಜೆಪಿ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿಯವರ ಭಾಷಣದ ವೇಳೆ ಅವರ ಕುರ್ಚಿ ಸುತ್ತುವರೆದು ಭಾಷಣ ಮಾಡದಂತೆ ತಡೆದ ಮಹಿಳಾ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.
ಫೆಬ್ರವರಿ 4ರಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೇಳೆ ವಿಪಕ್ಷಗಳು ನಡೆದುಕೊಂಡ ರೀತಿಯನ್ನು ಪತ್ರದಲ್ಲಿ ವಿವರಿಸಲಾಗಿದೆ. ಲೋಕಸಭೆಯ ಕೊಠಡಿಯೊಳಗೆ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಘಟನೆಗಳಲ್ಲಿ ಒಂದನ್ನು ನಾವು ನೋಡಿದ್ದೇವೆ. ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ಪ್ರವೇಶಿಸಿದ್ದಲ್ಲದೆ, ಮೇಜುಗಳ ಮೇಲೆ ಹತ್ತುವುದು, ಕಾಗದಗಳನ್ನು ಹರಿದು ಕುರ್ಚಿಯ ಕಡೆಗೆ ಎಸೆಯುವುದನ್ನು ಮಾಡಿದ್ದಾರೆ ಎಂದು ದೂರಿದ್ದಾರೆ.
ಲೋಕಸಭೆಯಲ್ಲಿ ನಡೆದ ಈ ಅಪಾಯಕಾರಿ ಘಟನೆ ನಮಗೆ ನೋವುಂಟುಮಾಡಿದೆ. ಸದನದೊಳಗೆ ಇಂತಹ ಕೃತ್ಯಗಳನ್ನು ಎಸಗಿದ ವಿಪಕ್ಷದ ಸಂಸದರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಹಿಳಾ ಸಂಸದರು ಒತ್ತಾಯಿಸಿದ್ದಾರೆ.
ಇನ್ನು ಸೋಮವಾರದಂದು ವಿಪಕ್ಷಗಳ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಮಿಳುನಾಡು ಲೋಕಸಭಾ ಸಂಸದ ಎಸ್. ಜೋತಿಮಣಿ ಅವರ ಲೆಟರ್‌ಹೆಡ್‌ನಲ್ಲಿ ಬರೆಯಲಾದ ಈ ಪತ್ರಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ, ಆರ್. ಸುಧಾ, ಜ್ಯೋತ್ಸ್ನಾ ಚರಂದಾಸ್ ಮಹಾಂತ್ ಮತ್ತು ವರ್ಷಾ ಏಕನಾಥ್ ಗಾಯಕ್ವಾಡ್ ಸೇರಿದಂತೆ ಹಲವಾರು ಮಹಿಳಾ ಸಂಸದರು ಸಹಿ ಮಾಡಿದ್ದರು.

