ಕೊರೊನಾ ಸೋಂಕಿನ ಸಂಖ್ಯೆ ಮತ್ತೆ ಏರಿಕೆ ಕಾಣ್ತಿದೆ. ಕೊರೊನಾ ಮೂರನೇ ಅಲೆ ಶುರುವಾಗುವ ಭಯ ಎದುರಾಗಿದೆ. ಈ ಮಧ್ಯೆ ಭಾರತದಲ್ಲಿ ಶೀಘ್ರದಲ್ಲೇ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆಯಿದೆ. ಬೆಂಗಳೂರು ಮೂಲದ ಔಷಧಿ ಕಂಪನಿ ಝೈಡಸ್ ಕ್ಯಾಡಿಲಾ ತನ್ನ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮೋದನೆ ಕೋರಿದೆ.
ಝೈಡಸ್ ಕ್ಯಾಡಿಲಾ ತನ್ನ ಡಿಎನ್‌ಎ ಲಸಿಕೆ ಝೈಕೋವ್-ಡಿ ಯ ತುರ್ತು ಬಳಕೆಗೆ ಅನುಮೋದನೆ ಕೋರಿ ಡ್ರಗ್ಸ್ ರೆಗ್ಯುಲೇಟರ್ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿದೆ. ಈ ಲಸಿಕೆ 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬಹುದು ಎಂದು ಕಂಪನಿ ಹೇಳಿದೆ.
ಈ ಮಧ್ಯೆ ದೇಶದ ಅತಿದೊಡ್ಡ ಔಷಧೀಯ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. 2-17 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೊವಾವಾಕ್ಸ್ ಲಸಿಕೆಯ ಹಂತ 2 ಮತ್ತು 3ರ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಬಾರದೆಂದು ಸಮಿತಿ ಶಿಫಾರಸು ಮಾಡಿದೆ. 2 ರಿಂದ 18 ವರ್ಷ ವಯಸ್ಸಿನ 920 ಮಕ್ಕಳ ಮೇಲೆ ಕ್ಲಿನಿಕಲ್ ಪ್ರಯೋಗಗಳಿಗಾಗಿ ಸೀರಮ್ ಸಂಸ್ಥೆ ಸೋಮವಾರ ಡಿಸಿಜಿಐಗೆ ಅರ್ಜಿ ಸಲ್ಲಿಸಿತ್ತು. ಆದರೆ ಸರ್ಕಾರದ ಸಮಿತಿ ಪ್ರಯೋಗಕ್ಕೆ ಅನುಮತಿಸಲು ನಿರಾಕರಿಸಿದೆ.