ಬೆಂಗಳೂರು: ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರಾಜ್ಯದಲ್ಲಿಯೂ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಚಿಂತನೆ ನಡೆದಿದೆ.
ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗ ನಿರ್ಧರಿಸಿವೆ. ರಾಜ್ಯದಲ್ಲಿಯೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ಶೀಘ್ರವೇ ನಡೆಯುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ ನೀಡಿದ ಆದೇಶ ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದ್ದು, ಆದೇಶದ ಅನ್ವಯ ಬಿಬಿಎಂಪಿ ಚುನಾವಣೆ ನಡೆಸಬೇಕಿದೆ. ವಾರ್ಡ್ ಪುನರ್ವಿಂಗಡನೆ ಪ್ರಕ್ರಿಯೆ ನಡೆಯುತ್ತಿದ್ದರೂ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಾಲಿ ವಾರ್ಡ್ ಗಳಿಗೆ ಚುನಾವಣೆ ನಡೆಸಬೇಕಿದೆ. ಮೀಸಲಾತಿ ವಿಚಾರದಲ್ಲಿ ಕೂಡ ಕೊಂಚ ಗೊಂದಲವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಾವು ಈಗಾಗಲೇ ಎಲ್ಲಾ ಚುನಾವಣೆಗೆ ಸಿದ್ಧವಾಗಿದ್ದೇವೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯವನ್ನು ಸುತ್ತಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧವಾಗಿದ್ದೇವೆ. ಅದೇ ರೀತಿ ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ. ಬಿಬಿಎಂಪಿ ವಲಯವಾರು ಸಭೆ ನಡೆಸಿ ಚುನಾವಣೆಗೆ ಸಿದ್ಧರಾಗಿದ್ದೇವೆ. ಸುಪ್ರೀಂಕೋರ್ಟ್ ಆದೇಶವನ್ನು ಸ್ಟಡಿ ಮಾಡಬೇಕು. ಸ್ಟಡಿ ಮಾಡುವಂತೆ ರಾಜ್ಯದ ಕಾನೂನು ತಂಡಕ್ಕೆ ಹೇಳಿದ್ದೇನೆ. ರಾಜ್ಯ ಚುನಾವಣಾ ಆಯೋಗ ಏನು ತೀರ್ಮಾನಿಸುತ್ತದೆ ಎಂಬುದನ್ನು ನೋಡಬೇಕು. ಎಲ್ಲಾ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.