
ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕೋರೋನಾ ಕಾರಣದಿಂದಾಗಿ ಆರು ತಿಂಗಳು ಚುನಾವಣೆ ಮುಂದೂಡುವಂತೆ ಸರ್ಕಾರ ಮನವಿ ಮಾಡಿತ್ತು. ಕ್ಷೇತ್ರ ಪುನರ್ ವಿಂಗಡನೆ, ಮೀಸಲಾತಿ ಮೊದಲಾದ ಕಾರಣಗಳಿಂದ ಚುನಾವಣೆ ತಡವಾಗಿದ್ದು, ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ಜಿಪಂ ಮತ್ತು ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಕರಡು ಪ್ರಕಟಿಸಲಾಗಿದೆ. ಇದರೊಂದಿಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಚುನಾವಣೆ ಸಿದ್ಧತೆ ಕೂಡ ಶುರುವಾಗಿದೆ. ಯಾವುದೇ ಪಕ್ಷಗಳ ಸಂಘಟನೆ ಮತ್ತು ವಿಧಾನಸಭೆ, ಲೋಕಸಭೆ ಚುನಾವಣೆಯ ಗೆಲುವಿಗೆ ಪ್ರಮುಖ ಹಂತವೆಂದು ಹೇಳಲಾಗುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಂದಾಗಿವೆ.
ಜಿಪಂ, ತಾಪಂ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನಗಳಿಸಲು ಕಾರ್ಯತಂತ್ರ ರೂಪಿಸುವೆ.. ಇನ್ನು ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಬದಲಾದ ಮೀಸಲಾತಿ ಅನ್ವಯ ತಮ್ಮ ಸೂಕ್ತ ಕ್ಷೇತ್ರಗಳತ್ತ ಆಕಾಂಕ್ಷಿಗಳು ದೃಷ್ಟಿ ನೆಟ್ಟಿದ್ದು, ಈಗಾಗಲೇ ಕಾರ್ಯಕರ್ತರು, ಮತದಾರರ ಮನ ಗೆಲ್ಲಲು ಪ್ರಯತ್ನ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.