ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬಕ್ಕೆ ಹೈಕೋರ್ಟ್ ಚಾಟಿ ಬೀಸಿದ್ದು, ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಫೆಬ್ರವರಿ 1 ರೊಳಗೆ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿಗೆ ಆದೇಶಿಸಿದೆ.
ಒಂದಲ್ಲ ಒಂದು ಕಾರಣ ನೀಡಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮುಂದೂಡುತ್ತಿರುವ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿದ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದ್ದು, 2023ರ ಫೆಬ್ರವರಿ 1 ರೊಳಗೆ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಬಸವನ ಹುಳುವಿನ ರೀತಿ ತೆವಳದಂತೆ ತಾಕಿತು ಮಾಡಿದೆ.
ತಾಪಂ, ಜಿಪಂ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ನಿಗದಿಗೆ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗವನ್ನು ಸರ್ಕಾರ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ ಮೂಲ ಅರ್ಜಿಯ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಪಿ.ಬಿ. ವರ್ಲೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆದಿದೆ. ಹೈಕೋರ್ಟ್ ಆದೇಶಗಳು, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಸರ್ಕಾರ ಪಾಲಿಸಬೇಕು. ಕಾನೂನು ಬದ್ಧವಾಗಿ ಚುನಾವಣೆ ನಡೆಸಬೇಕೆಂಬ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸಬೇಕು ಎಂದು ಹೇಳಲಾಗಿದೆ.