ಬೆಂಗಳೂರು: ನ್ಯಾಯಾಲಯ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೀಮಾ ನಿರ್ಣಯ, ಕ್ಷೇತ್ರ ಮರು ವಿಂಗಡಣೆ ಕಾರ್ಯ ಪೂರ್ಣಗೊಂಡಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹೈಕೋರ್ಟ್ ನಿಂದ ಕ್ಷೇತ್ರ ಪುನರ್ ವಿಂಗಡಣೆ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಒಂದು ತಿಂಗಳು ಗಡುವು ನೀಡಲಾಗಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಾಂವಿಧಾನಿಕ ಸಂಸ್ಥೆಗಳಾಗಿದ್ದು, ಇವುಗಳಿಗೆ ಚುನಾವಣೆ ನಡೆಸದೆ ವಿಳಂಬ ಧೋರಣೆ ಸಲ್ಲದು. ನಾಲ್ಕು ವಾರಗಳಲ್ಲಿ ಕ್ಷೇತ್ರ ಮರು ವಿಂಗಡಣೆ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಕೋರ್ಟ್ ತಾಕೀತು ಮಾಡಿದೆ. ಚುನಾವಣೆ ವಿಳಂಬಕ್ಕೆ ಸುಪ್ರೀಂಕೋರ್ಟ್ ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರಾಜ್ಯದಲ್ಲಿ 1130 ಜಿಲ್ಲಾ ಹಾಗೂ ಸುಮಾರು 3660 ತಾಲೂಕು ಪಂಚಾಯಿತಿ ಕ್ಷೇತ್ರಗಳು ರಚನೆಯಾಗಿವೆ ಎನ್ನಲಾಗಿದೆ.
ಈಗ ಮೀಸಲಾತಿ ನಿಗದಿಪಡಿಸಬೇಕಿದ್ದು, ಮೀಸಲಾತಿ ನಿಗದಿಯಾದ ನಂತರ ಯಾವುದೇ ತಕರಾರು ಇಲ್ಲದೆ ಕೋರ್ಟ್ ನಿಂದ ತಡೆಯಾಜ್ಞೆ ಬಾರದಿದ್ದಲ್ಲಿ ಫೆಬ್ರವರಿ ವೇಳೆಗೆ ಜಿಲ್ಲಾ ಹಾಗು ತಾಲೂಕು ಚುನಾವಣೆ ನಡೆಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ನಡುವೆಯೇ ರಾಜಕೀಯ ಪಕ್ಷಗಳಿಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಾಗಿರುವುದು ಸವಾಲಾಗಿದೆ.