ಮೈಸೂರು: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರೀತಿ ಚುನಾವಣೆ ಮುಂದೂಡುವುದಿಲ್ಲ. ಬಿಬಿಎಂಪಿ, ಜಿಪಂ ಮತ್ತು ತಾಪಂ ಚುನಾವಣೆಗಳನ್ನು ನಡೆಸಲು ಸರ್ಕಾರದ ಸಿದ್ಧವಿದೆ ಎಂದು ಹೇಳಿದ್ದಾರೆ.
ವಾರ್ಡ್ ಗಳ ಪುನರ್ ವಿಂಗಡನೆ ವಿಚಾರದಲ್ಲಿ ಕೋರ್ಟ್ ಬಿಬಿಎಂಪಿಗೆ 12 ವಾರ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ 10 ವಾರಗಳ ಗಡುವು ನೀಡಿತ್ತು. ಅದರ ಆಧಾರದಲ್ಲಿ ವರದಿ ಸಿದ್ದವಾಗುತ್ತಿದೆ. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನ್ಯಾಯಾಲಯ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಚುನಾವಣೆ ವಿಚಾರದಲ್ಲಿ ಎಂದಿಗೂ ನಾವು ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುತ್ತಿದ್ದರು. ನಾವು ಆ ರೀತಿ ಮಾಡದೆ ನ್ಯಾಯಾಲಯದ ತೀರ್ಮಾನದಂತೆ ನಡೆಯುತ್ತೇವೆ. ಬಿಬಿಎಂಪಿ, ಜಿಪಂ, ತಾಪಂ ಚುನಾವಣೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಿಎಂ ಹೇಳಿದ್ದಾರೆ.