ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ. ಚುನಾವಣೆ ಆಯೋಗದ ವಿಂಗಡಣೆಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಹೊಸ ಹೆಜ್ಜೆ ಇಟ್ಟಿದ್ದು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯೋಗದಿಂದ ಹಿಂದೆಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ವಿಂಗಡಣೆ ಪಟ್ಟಿ ಪ್ರಕಟಣೆ ಮಾಡಿ ಆಕ್ಷೇಪಣೆ ಆಹ್ವಾನಿಸಿದ್ದು, ಮೀಸಲಾತಿ ನಿಗದಿಪಡಿಸಿ ಚುನಾವಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಹೊಸ ಆಯೋಗ ರಚಿಸುವುದಾಗಿ ಪ್ರಕಟಿಸಲಾಗಿದ್ದು, ಇದರಿಂದ ಜಿಪಂ, ತಾಪಂ ಚುನಾವಣೆ ವಿಳಂಬವಾಗಲಿದೆ ಎಂದು ಹೇಳಲಾಗಿದೆ.