ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಮಸೂದೆ ವಿಧಾನಸಭೆಯಲ್ಲಿ ಪಾಸಾಗಿದೆ. ಮಸೂದೆ ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಸಭಾತ್ಯಾಗ ನಡೆಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಿಂದ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಇದರ ನಡುವೆಯೇ ಧ್ವನಿಮತದಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವ ಕುರಿತು ಪ್ರತ್ಯೇಕ ಆಯೋಗ ರಚಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿದೆ.
ಅಧಿಕಾರ ವಿಕೇಂದ್ರೀಕರಣಕ್ಕೆ ತಿದ್ದುಪಡಿ ವಿಧೇಯಕ ವಿರುದ್ಧವಾಗಿದ್ದು, ಜಿಪಂ, ತಾಪಂ ಚುನಾವಣೆ ಮುಂದೂಡುವ ದುರುದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆರೋಪಿಸಿದ್ದಾರೆ. ವಿರೋಧದ ನಡುವೆಯೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸದನಕ್ಕೆ ಮನವಿ ಮಾಡಿದ್ದು, ಚರ್ಚೆಯ ನಂತರ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದ್ದಾರೆ. ಧ್ವನಿಮತದಿಂದ ವಿಧೇಯಕ ಅಂಗೀಕಾರವಾಗಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಎಲ್ಲಾ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ಅಧಿಸೂಚನೆ ರದ್ದಾಗಲಿದೆ ಎಂದು ಹೇಳಲಾಗಿದೆ.