ಕಚೇರಿಯ ಉದ್ಯೋಗಿಗಳ ಆನ್ ಲೈನ್ ಜೂಮ್ ಸಭೆಯು ಹಿಂದಿ ಭಾಷೆ ಬಳಸಿದ ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲಕ್ಕೆ ತಿರುಗಿದ ವಿಡಿಯೋ ವೈರಲ್ ಆಗಿದ್ದು ಗಮನ ಸೆಳೆದಿದೆ.
ವಿಡಿಯೋ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರತಿಕ್ರಿಯೆಗಳ ಕೋಲಾಹಲವನ್ನು ಹುಟ್ಟುಹಾಕಿದೆ. ‘ಘರ್ ಕೆ ಕಾಲೇಶ್’ ಎಂಬ ಟ್ವಿಟರ್ ಪುಟದಿಂದ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಸಿಬ್ಬಂದಿಗಳ ಆನ್ ಲೈನ್ ಮೀಟಿಂಗ್ ನಡೆಯುತ್ತಿರುತ್ತದೆ.
ವ್ಯಕ್ತಿಯೊಬ್ಬರು ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದ ತಕ್ಷಣ, ಒಬ್ಬ ಉದ್ಯೋಗಿ ತನಗೆ ಮತ್ತು ಇತರರಿಗೆ ಹಿಂದಿ ಅರ್ಥವಾಗದ ಕಾರಣ ಇಂಗ್ಲಿಷ್‌ನಲ್ಲಿ ಮಾತನಾಡಲು ವಿನಂತಿಸಿದ್ದಾರೆ. ಆ ವ್ಯಕ್ತಿ ಇಂಗ್ಲಿಷ್‌ನಲ್ಲಿ ಸಂವಹನ ನಡೆಸಲು ಮುಂದಾದರೂ ಶೀಘ್ರದಲ್ಲೇ ಮತ್ತೆ ಹಿಂದಿ ಭಾಷೆಯಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಇದು ಇತರರನ್ನು ಕೆರಳಿಸಿ ಮೀಟಿಂಗ್ ನಲ್ಲಿದ್ದವರ ಮಧ್ಯೆ ವಾದಕ್ಕೆ ಕಾರಣವಾಯಿತು.
ಓರ್ವ ಮಹಿಳಾ ಉದ್ಯೋಗಿ, ಪದೇ ಪದೇ ಹಿಂದಿಯಲ್ಲಿ ಯಾಕೆ ಹೇಳುತ್ತೀರಿ ? ಹಾಗಾದ್ರೆ ನಾವು ಕನ್ನಡದಲ್ಲಿ ಮಾತಾಡಬಹುದಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಸಣ್ಣವಿಷಯಕ್ಕಾಗಿ ಜಗಳ ಪ್ರಾರಂಭಿಸಬೇಡಿ ಎಂದು ವಿನಂತಿಸಿದ್ದಾರೆ.
ಆದರೆ ಗರಂ ಆದ ನೌಕರರು ತಮ್ಮದೇ ಆದ ಸ್ಥಳೀಯ/ ಮಾತೃಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದರು. ಆಗ ಸಭೆ ಗೊಂದಲಕ್ಕೆ ತಿರುಗಿತು.
ವೀಡಿಯೊದ ದಿನಾಂಕವು ಸ್ಪಷ್ಟವಾಗಿಲ್ಲ. ಆದಾಗ್ಯೂ ಕೆಲವು ದಿನಗಳ ಹಿಂದೆ ಹಂಚಿಕೊಂಡ ನಂತರ ಇದು 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯನ್ನು ಕೆಲವರು ಬೆಂಬಲಿಸಿದರೆ, ಕೆಲವರು ವಿಭಿನ್ನ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
———-