ಗ್ರಾಹಕರ ಆರ್ಡರ್ ಸ್ವೀಕರಿಸಿ ಬಳಿಕ ಆರ್ಡರ್ ಕ್ಯಾನ್ಸಲ್ ಮಾಡಿದ ಜೊಮಾಟೊ 10 ಸಾವಿರ ರೂ. ದಂಡ ತೆತ್ತ ಪ್ರಸಂಗ ನಡೆದಿದೆ.
ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 2020ರಲ್ಲಿ ಪಿಜ್ಜಾ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿದ ಜೊಮಾಟೋಗೆ ಗ್ರಾಹಕರಿಗೆ 10,000 ರೂ. ಪಾವತಿಸಲು ಆದೇಶಿಸಿದೆ. ಜೊತೆಗೆ, ಆಹಾರ ವಿತರಣಾ ವೇದಿಕೆಯು ಆ ಗ್ರಾಹಕರಿಗೆ ಉಚಿತ ಊಟವನ್ನು ಸಹ ನೀಡಬೇಕಾಗುತ್ತದೆ.
ಅಜಯ್ ಕುಮಾರ್ ಶರ್ಮಾ ಎಂಬ ವ್ಯಕ್ತಿ ಅವರ ದೂರಿನ ಪ್ರಕಾರ, ರಾತ್ರಿ 10.15 ರ ಸುಮಾರಿಗೆ ಆಪ್ ಬಳಸಿ ಇಟಲಿ ಟ್ರೀಟ್ ಪಿಜ್ಜಾದಿಂದ ಪಿಜ್ಜಾ ಆರ್ಡರ್ ಮಾಡಿದರು, 287 ಮೊತ್ತದ ಬಿಲ್ ಅನ್ನು ಆನ್ಲೈನ್ ಪಾವತಿ ಮಾಡಿದರು. ಬಿಲ್ನಲ್ಲಿ ತೆರಿಗೆಗಳು ಮತ್ತು ಸಮಯಕ್ಕೆ ತಲುಪಿಸಲು ರೂ.10 ಒಳಗೊಂಡಿತ್ತು.
ಆದರೆ ಜೊಮಾಟೋಗೆ ಪಿಜ್ಜಾವನ್ನು ತಲುಪಿಸಲು ಸಾಧ್ಯವಾಗಲಿಲ್ಲ. ಆದರೆ ಆರ್ಡರ್ ಅನ್ನು ರದ್ದುಗೊಳಿಸಲಾಗಿದೆ ಎಂಬ ಸಂದೇಶವನ್ನು ಸ್ವೀಕರಿಸಿದರು. ಮರುಪಾವತಿ ಪ್ರಕ್ರಿಯೆಯನ್ನೂ ಆರಂಭಿಸಲಾಗುವುದು ಎಂದು ಹೇಳಲಾಗಿತ್ತು.
ಈ ಸಮಯದಲ್ಲಿ ಐಟಂ ಅನ್ನು ತಲುಪಿಸಲು ಯಾವುದೇ ತೊಂದರೆ ಇದ್ದಲ್ಲಿ ಆರ್ಡರ್ ಬುಕಿಂಗ್ ಮಾಡಬಾರದು, ಅವರು ನಂತರ ಅದನ್ನು ರದ್ದುಗೊಳಿಸಿದರು. ಹೀಗಾಗಿ, ಸೇವೆ ಸಲ್ಲಿಸುವಲ್ಲಿ ಗಂಭೀರ ಕೊರತೆಯು ಕಾಣಿಸಿದೆ ಎಂದು ಶರ್ಮಾ ದೂರಿದ್ದರು.
ಮೊತ್ತವನ್ನು ಮರುಪಾವತಿಸಲಾಗಿದೆಯಾದರೂ, ಕೋಪಗೊಂಡ ಗ್ರಾಹಕರು ಜೊಮಾಟೊವನ್ನು ಸಮಯಕ್ಕೆ ತಲುಪಿಸುವ ಭರವಸೆಯನ್ನು ಉಳಿಸಿಕೊಳ್ಳಲು ಅಥವಾ “ಕಭಿ ಟು ಲೇಟ್ ಹೋ ಜಾತಾ” ಎಂದು ಹೇಳುವ ತಮ್ಮ ಪ್ರಚಾರವನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇತರ ವಿಷಯಗಳ ಜೊತೆಗೆ ಕಿರುಕುಳಕ್ಕಾಗಿ ಪರಿಹಾರ ನೀಡಬೇಕೆಂದು ಸಹ ಒತ್ತಾಯಿಸಿದ್ದರು.
ಶರ್ಮಾ ಅವರು ಜಿಲ್ಲಾ ಆಯೋಗದ ಮುಂದೆ ದೂರು ಸಲ್ಲಿಸಿದಾಗ, ಅದು ಪ್ರಾಥಮಿಕ ಹಂತದಲ್ಲಿ ವಜಾಗೊಂಡಿತು. ನಂತರ ರಾಜ್ಯ ಆಯೋಗದ ಮುಂದೆ ಮೇಲ್ಮನವಿ ಸಲ್ಲಿಸಲು ಮುಂದಾದರು. ಅವರು ಹೊಸದಿಲ್ಲಿಯಲ್ಲಿರುವ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೂ ದೂರು ನೀಡಿದ್ದರು.
ಬಳಿಕ ವಿಚಾರಣೆ ನಡೆದು, ಆರ್ಡರ್ ಮಾಡಿದವರು ತಡರಾತ್ರಿಯಲ್ಲಿ ಆಹಾರದಿಂದ ವಂಚಿತರಾಗಿದ್ದಾರೆ ಎಂಬುದನ್ನು ಗ್ರಾಹಕರ ಆಯೋಗ ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ದಂಡ ಪಾವತಿಗೆ ಆದೇಶಿಸಿತು.