ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಜೊಮ್ಯಾಟೊ ಕಂಪನಿಯ ಡೆಲಿವರಿ ಬಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಮರಾಜ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೊಮ್ಯಾಟೊ ಕಂಪನಿಯ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜ್ ಮೇಕಪ್ ಆರ್ಟಿಸ್ಟ್, ಫ್ಯಾಷನ್ ಡಿಸೈನರ್ ಆಂಧ್ರಪ್ರದೇಶದ ಹಿತೇಶ್ ಚಂದ್ರಾಣಿ ಅವರ ಮೇಲೆ ಹಲ್ಲೆ ಮಾಡಿದ್ದಾರನೆ.
ಹಿತೇಶ್ ಚಂದ್ರಾಣಿ ಊಟಕ್ಕೆ ಆನ್ಲೈನ್ ಮೂಲಕ ಜೊಮ್ಯಾಟೊ ಕಂಪನಿಗೆ ಆರ್ಡರ್ ಮಾಡಿದ್ದು, ವಿಳಂಬವಾಗಿ ಫುಡ್ ಡಿಲೆವರಿ ಮಾಡಿದ ಹಿನ್ನೆಲೆಯಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಅವರ ಮನೆ ಲೇಟಾಗಿ ಊಟ ತೆಗೆದುಕೊಂಡು ಬಂದಿದ್ದ ಕಾಮರಾಜ್ ಪಾರ್ಸೆಲ್ ಊಟ ತೆಗೆದುಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಸ್ವೀಕರಿಸದಿದ್ದಾಗ ಟೇಬಲ್ ಮೇಲೆ ಇಟ್ಟು ಅವಾಚ್ಯವಾಗಿ ನಿಂದಿಸಿ ಮುಖಕ್ಕೆ ಬಲವಾಗಿ ಗುದ್ದಿ ಪರಾರಿಯಾಗಿದ್ದಾನೆ.
ಇದರಿಂದ ತೀವ್ರ ರಕ್ತಸ್ರಾವವಾಗಿ ಹಿತೇಶ್ ಚಂದ್ರಾಣಿಗೆ ಪೆಟ್ಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೋವು ತೋಡಿಕೊಂಡಿದ್ದಾರೆ. ಅಲ್ಲದೆ, ಪೊಲೀಸ್ ಮಹಾನಿರ್ದೇಶಕರು ಮತ್ತು ಜೊಮ್ಯಾಟೊ ಕಂಪನಿಗೆ ವಿಡಿಯೋ ಪೋಸ್ಟ್ ಮಾಡಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲ್ಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆನ್ನಲಾಗಿದೆ. ಜೊಮ್ಯಾಟೊ ಕಂಪನಿ ಘಟನೆ ಬಗ್ಗೆ ಕ್ಷಮಾಪಣೆ ಕೇಳಿದ್ದು, ಮಹಿಳೆಯ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.