‘ಫಿಟ್ನೆಸ್’ ಕಾಪಾಡಿಕೊಳ್ಳಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ಇದಕ್ಕಾಗಿ ಜಿಮ್, ವ್ಯಾಯಾಮ ಸೇರಿದಂತೆ ವಿವಿಧ ಕಸರತ್ತುಗಳನ್ನು ಮಾಡುವುದರ ಜೊತೆಗೆ ಫುಡ್ ಡಯಟ್ ಅನುಸರಿಸಿ ಇದನ್ನು ಸಾಧಿಸಲು ಬೆವರು ಹರಿಸುತ್ತಾರೆ. ಆದರೆ ಎಲ್ಲರಿಗೂ ಇದನ್ನು ಮುಂದುವರಿಸಿಕೊಂಡು ಹೋಗಲು ಆಗದ ಕಾರಣ ಮತ್ತೆ ಎಂದಿನ ಸೈಜ್ ಗೆ ಮರಳುತ್ತಾರೆ.
ಆದರೆ ಝಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ತಮ್ಮ ಗುರಿಯನ್ನು ಛಲ ಬಿಡದೆ ಸಾಧಿಸುವ ಮೂಲಕ ಇದೀಗ ಇತರರಿಗೆ ಮಾದರಿಯಾಗಿದ್ದಾರೆ. 2019 ರಲ್ಲಿ 87 ಕೆಜಿ ಇದ್ದ ದೀಪಿಂದರ್ ಗೋಯಲ್ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2023ರಲ್ಲಿ 72 ಕೆಜಿಗೆ ಇಳಿದಿದ್ದಾರೆ. ಜೊತೆಗೆ ಅವರ ದೇಹದ ಕೊಲೆಸ್ಟ್ರಾಲ್ ಮಟ್ಟ 165 ರಿಂದ 55ಕ್ಕೆ ಇಳಿದಿದೆಯಂತೆ.
ತಮ್ಮ ಈ ಸಕ್ಸಸ್ ಸ್ಟೋರಿಯನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ದೀಪಿಂದರ್ ಗೋಯಲ್, ನಿಯಮಿತ ವ್ಯಾಯಾಮ, ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸಿದ ಕಾರಣಕ್ಕೆ ಇದನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಈ ಫಿಟ್ನೆಸ್ ಕಾಪಾಡಿಕೊಂಡಿರುವ ಕಾರಣಕ್ಕೆ ನನ್ನ ದೈಹಿಕ ಮತ್ತು ಮಾನಸಿಕ ಕ್ಷಮತೆ ಮೇಲೆ ಹೆಚ್ಚಿನ ಸಕರಾತ್ಮಕ ಪರಿಣಾಮ ಕಂಡು ಬಂದಿದೆ ಎಂದು 40 ವರ್ಷದ ದೀಪಿಂದರ್ ತಮ್ಮ instagram ಬರಹದಲ್ಲಿ ತಿಳಿಸಿದ್ದಾರೆ.