ಬೆಂಗಳೂರು: ಝಿಯೂ ಹೋಮ್ಸ್ ಕಂಪನಿ ಹೆಸರಲ್ಲಿ ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕ ಹಾಗೂ ಆತನ ಪತ್ನಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಹ್ಮದ್ ಅಲಿ ಬೇಗ್ ಹಾಗೂ ಮುಯಿನಾ ಬಂಧಿತ ದಂಪತಿ. ಅಹ್ಮದ್ ಅಲಿ ಬೇಗ್ ಹಾಗೂ ಮುಯಿನಾ ಝಿಯೂ ಹೋಮ್ಸ್ ಹೆಸರಲ್ಲಿ ಮನೆ ಮತ್ತು ಫ್ಲ್ಯಾಟ್ ಗಳನ್ನು ಬಾಡಿಗೆಗೆ ಪಡೆದು ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದರು. ಬಳಿಕ ಆ ಮನೆಗಳನ್ನು ಬೇರೊಬ್ಬರಿಗೆ ಭೋಗ್ಯಕ್ಕೆ ನೀಡಿ ಕೋಟಿ ಕೋಟಿ ವಂಚಿಸುತ್ತಿದ್ದರು.
15-20 ಸಾವಿರ ರೂಪಾಯಿಯಂತೆ ಝಿಯೂ ಕಂಪನಿ ಹೆಸರಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಬೇರೆಯವರಿಗೆ 15-20 ಲಕ್ಷಕ್ಕೆ ಭೋಗ್ಯಕ್ಕೆ ಹಾಕಿ ವಂಚಿಸುತ್ತಿದ್ದರು. ಮನೆ ಮಾಲೀಕರು ಬಾಡಿಗೆ ಕೊಟ್ಟಿದ್ದೇವೆ ಎಂದು ಸುಮ್ಮನಿರುತ್ತಿದ್ದರು. ಆದರೆ ಎರಡು ಮೂರು ತಿಂಗಳು ಬಾಡಿಗೆ ಕೊಟ್ಟು ವಂಚಿಸುತ್ತಿದ್ದರು. ಮನೆ ಮಾಲೀಕರು ಸ್ಥಳಕ್ಕೆ ಹೋಗಿ ನೋಡಿದರೆ ಝಿಯೂ ಕಂಪನಿಯವರು ಬಿಟ್ಟು ಬೇರೆಯಾರೋ ವ್ಯಕ್ತಿಗಳು ವಾಸವಾಗಿರುತ್ತಿದ್ದರು. ಮೋಸಹೋದ ಮನೆ ಮಾಲೀಕರು ಹೆಣ್ಣೂರು ಪೊಲೀಸ್ ಠಾಣೆ, ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ಇದೀಗ ಹೈದರಾಬಾದ್ ನಲ್ಲಿ ಝಿಯೂ ಕಂಪನಿ ಮಾಲೀಕ ಹಾಗೂ ಪತ್ನಿಯನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಹಲವು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.