
ಜನಾಂಗೀಯ ಯುದ್ಧಗಳಿಂದ ನರಳಿರುವ ಜ಼ಿಂಬಾಬ್ವೆ ಜಗತ್ತಿನ ಅತ್ಯಂತ ದಯನೀಯ ದೇಶವೆಂದು ಹಾಂಕೇಸ್ ವಾರ್ಷಿಕ ದುಃಸ್ಥಿತಿ ಸೂಚ್ಯಂಕ (ಹಾಮಿ) ವರದಿ ತಿಳಿಸಿದೆ. ಈ ದೇಶದಲ್ಲಿ ಹಣದುಬ್ಬರ ನಿಯಂತ್ರಣ ಮೀರಿದ್ದು, ಕಳೆದ ವರ್ಷದ ಹಣದುಬ್ಬರದ ದರವು 243.8% ತಲುಪಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಅಧ್ಯಕ್ಷ ಎಮ್ಮರ್ಸನ್ ನಾಂಗಾವಾ ಹಾಗೂ ಅವರ ಜ಼ಾನು-ಪಿಎಪ್ ಪಕ್ಷದ ಸರ್ಕಾರದ ನೀತಿಗಳಿಂದಾಗಿ ಜ಼ಿಂಬಾಭ್ವೆ ನಾಗರಿಕರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ವರದಿ ತಿಳಿಸುತ್ತಿದೆ. ನಿರುದ್ಯೋಗ, ಹಣದುಬ್ಬರ, ಬ್ಯಾಂಕ್ ಸಾಲದ ಬಡ್ಡಿದರಗಳು, ಜಿಡಿಪಿ ವೃದ್ಧಿಯ ಪ್ರಗತಿ ಸೇರಿದಂತೆ ಆರ್ಥಿಕ ಆರೋಗ್ಯದ ಸೂಚ್ಯಂಕಗಳ ಅಧ್ಯಯನ ಮಾಡಿದ ಅರ್ಥ ತಜ್ಞ ಸ್ಟೀವ್ ಹಾಂಕೆ ನೇತೃತ್ವದ ತಂಡ ಒಟ್ಟು 157 ದೇಶಗಳ ಸ್ಥಿತಿಗತಿಗಳನ್ನು ವಿಶ್ಲೇಷಣೆ ಮಾಡಿದೆ.
ಪಟ್ಟಿಯಲ್ಲಿ ಅತ್ಯಂತ ಕಡಿಮೆ ಶೋಚನೀಯ ಸ್ಥಿತಿಯಲ್ಲಿರುವ ದೇಶ ಸ್ವಿಜ಼ರ್ಲೆಂಡ್ ಎಂದು ತಿಳಿದು ಬಂದಿದೆ. ಜ಼ಿಂಬಾಬ್ವೆಯೊಂದಿಗೆ ವೆನೆಜ಼ುಯೆಲಾ, ಸಿರಿಯಾ ಮಲೆಬನಾನ್, ಸುಡಾನ್, ಅರ್ಜೆಂಟೀನಾ, ಯೆಮೆನ್, ಉಕ್ರೇನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ, ಅಂಗೋಲಾ, ಟೋಂಗಾ, ಮತ್ತು ಘಾನಾ ಅತ್ಯಂದ ಶೋಚನೀಯ ಪರಿಸ್ಥಿತಿಯ ಪಟ್ಟಿಯಲ್ಲಿ ಅಗ್ರ 15 ಸ್ಥಾನಗಳಲ್ಲಿವೆ.
ಇದೇ ಪಟ್ಟಿಯಲ್ಲಿ 103ನೇ ಸ್ಥಾನದಲ್ಲಿರುವ ಭಾರತದಲ್ಲಿನ ಸಮಸ್ಯೆ ಎಂದರೆ ನಿರುದ್ಯೋಗದ್ದಾಗಿದೆ ಎಂದು ವರದಿ ಹೇಳುತ್ತದೆ. ಬ್ರೆಜ಼ಿಲ್ (27), ಪಾಕಿಸ್ತಾನ (35), ನೇಪಾಳ (63) ಹಾಗೂ ಸ್ವೀಡನ್‌ಗಿಂತ (88) ಭಾರತದ ಸೂಚ್ಯಂಕ ಉತ್ತಮವಾಗಿದೆ.
ವಿಶ್ವ ಸಂತಸದ ಸೂಚ್ಯಂಕದಲ್ಲಿ ಸತತ ಆರು ವರ್ಷಗಳಿಂದ ಅಗ್ರ ಸ್ಥಾನಿಯಾಗಿರುವ ಫಿನ್ಲೆಂಡ್ ಇದೇ ಪಟ್ಟಿಯಲ್ಲಿ 109ನೇ ಸ್ಥಾನದಲ್ಲಿದೆ. ಇದೇ ವೇಳೆ, ಅಮೆರಿಕವು ಅತ್ಯಂತ ಕಡಿಮೆ ಮಟ್ಟದ ಶೋಚನೀಯ ಸ್ಥಿತಿಯಲ್ಲಿರುವ ದೇಶವಾಗಿದ್ದು, ಪಟ್ಟಿಯಲ್ಲಿ 134ನೇ ಸ್ಥಾನದಲ್ಲಿದೆ.