ಬೆಂಗಳೂರು: ಜಿಲ್ಲಾ ಪಂಚಾಯಿತಿಗಳಲ್ಲಿ ಅನುಕಂಪದ ನೌಕರಿಗೆ ಬ್ರೇಕ್ ಹಾಕಲಾಗಿದೆ. ಮುಂದಿನ ನಿರ್ದೇಶನದವರೆಗೆ ಅನುಕಂಪದ ನೌಕರಿ ಕೈಗೊಳ್ಳದಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ನೇರ ನೇಮಕಾತಿ ಕೋಟಾದಡಿ ಜಿಲ್ಲಾ ಪಂಚಾಯಿತಿಗಳಲ್ಲಿ ಭರ್ತಿಗೆ ಲಭ್ಯವಿರುವ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಯಾವುದೇ ನೇಮಕಾತಿ ಮಾಡದಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒಗಳಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ನೀಡಿದೆ.
ಅಪರ ಮುಖ್ಯ ಕಾರ್ಯದರ್ಶಿ ಅವರು ಈ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಪತ್ರ ಬರೆದಿದ್ದಾರೆ. ಎಲ್ಲಾ ಪ್ರಾದೇಶಿಕ ಆಯುಕ್ತರ ಕಚೇರಿಗಳಿಂದ ಸ್ವೀಕೃತವಾಗುತ್ತಿರುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳಿಗೆ ಮುಂದಿನ ನಿರ್ದೇಶನದ ವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ.
ಈ ಹಿಂದೆ ಜಿಪಂಗಳಲ್ಲಿ ನೇರ ನೇಮಕಾತಿಯಡಿ ಭರ್ತಿಗೆ ಲಭ್ಯವಿರುವ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಬರುವ ಪ್ರಸ್ತಾವನೆ ಪರಿಗಣಿಸಲು ಅವಕಾಶ ನೀಡಲಾಗಿತ್ತು.