ಮಾಸ್ಕೋ: ಯಾವುದೇ ಅತಿಯಾದರೂ ಅಪಾಯಕಾರಿ ಎಂಬುದಕ್ಕೆ ಮತ್ತೆ ಮತ್ತೆ ಉದಾಹರಣೆಗಳು ಸಿಗುತ್ತಿರುತ್ತವೆ. ಅತಿಯಾದರೆ ಅಮೃತ ಕೂಡ ವಿಷವಾಗಿ ಪರಿಣಮಿಸತ್ತೆ ಎಂಬ ಮಾತಿದೆ. ಅತಿಯಾದ ಡಯಟ್ ಕೂಡ ಆರೊಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ ಎಂದರೆ ತಪ್ಪಾಗಲಾರದು. ಇಲ್ಲೋರ್ವ ಯುವತಿ ದಶಕಗಳಿಂದ ಡಯಟ್ ಮೊರೆ ಹೋಗಿ ಬರಿ ತರಕಾರಿ, ಹಣ್ಣು, ಜ್ಯೂಸ್ ಗಳನ್ನೇ ಸೇವಿತ್ತಿದ್ದವಳು ಇದೀಗ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾಳೆ.
ಕಳೆದ 7 ವರ್ಷಗಳಿಂದ ಹಸಿ ತರಕಾರಿ, ಹಣ್ಣು, ಜ್ಯೂಸ್ ಗಳನ್ನು ಸೇವಿಸುತ್ತಾ ತನ್ನ ಡಯಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಮಾಹಿತಿ ಹಂಚಿಕೊಳ್ಳುತ್ತಿದ್ದ ರಷ್ಯಾದ ಯುವತಿ ಝನ್ನಾ ಸ್ಯಾಮ್ಸೊನೋವಾ (39) ಈಗ ಏಕಾಏಕಿ ಸಾವನ್ನಪ್ಪಿದ್ದಾಳೆ. ಸ್ಯಾಮ್ಸೊನೋವಾ ಡಯಟ್ ಟಿಫ್ಸ್ ಗಳು ಸಾಕಷ್ಟು ಜನಪ್ರಿಯವಾಗಿತ್ತಲ್ಲದೇ ಜಗತ್ತಿನಾದ್ಯಂತ ಈಕೆ ಹೆಸರುವಾಸಿಯಾಗಿದ್ದಳು.
ಕೆಲ ತಿಂಗಳ ಹಿಂದಷ್ಟೇ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಸ್ಯಾಮ್ಸೊನೋವಾ ಅತಿಯಾದ ಸುಸ್ತು, ಕಾಲುನೋವಿನಿಂದ ಬಳಲುತ್ತಿದ್ದಳು. ವೈದ್ಯರಿಂದ ಚಿಕಿತ್ಸೆ ಪಡೆದು ತನ್ನ ಊರಿಗೆ ವಾಪಸ್ ಆಗಿದ್ದಳು. ಈಗ ಸ್ಯಾಮ್ಸೊನೋವಾ ಸಾವನ್ನಪ್ಪಿದ್ದು, ಆಕೆಯ ತಾಯಿ ಹೇಳುವ ಪ್ರಕಾರ ಸ್ಯಾಮ್ಸೊನೋವಾ ಕಾಲರಾ ಸೋಂಕಿನಿಂದ ಮೃತಪಟ್ಟಿದ್ದಾಳೆ. ಆದರೆ ಯುವತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹಲವು ವರ್ಷಗಳಿಂದ ಸಂಪೂರ್ಣವಾಗಿ ಸಸ್ಯಾಹಾರ ಪದ್ಧತಿಗೆ ಬದಲಾಗಿದ್ದ ಸ್ಯಾಮ್ಸೊನೋವಾ, ಕೇವಲ ಸಿಹಿ ಹಲಸು, ಸೂರ್ಯಕಾಂತಿ ಬೀಜದ ಸ್ಮೂಥಿ, ಹಣ್ಣುಗಳ ಜ್ಯೂಸ್ ಮಾತ್ರವಲ್ಲ ವಿಶ್ವದ ಅತಿ ದುರ್ಗಂಧದ ಹಣ್ಣು ಎಂದು ಕರೆಯಲ್ಪಡುವ ದುರಿಯನ್ ಹಣ್ಣು ಸೇರಿದಂತೆ ಕೇವಲ ಹಣ್ಣು, ಆಯ್ದ ತರಕಾರಿಗಳನ್ನೇ ಸೇವಿಸುತ್ತಿದ್ದಳು. ತನ್ನ ಆಹಾರ ಶೈಲಿಯಿಂದ ಪ್ರತಿದಿನ ತನ್ನ ಮನಸ್ಸು ಹಾಗೂ ದೇಹದಲ್ಲಿ ಬದಲಾವಣೆಗಳನ್ನು ಕಾಣುತ್ತಿರುವುದಾಗಿ ತಿಳಿಸಿದ್ದಳು. ಅಲ್ಲದೇ ಹೊಸರೀತಿಯ ಆಹಾರ ಶೈಲಿಯನ್ನು ಆನಂದಿಸುತ್ತಿರುವುದಾಗಿ ಹಾಗೂ ಇದನ್ನು ಎಂದೂ ಬದಲಾಯಿಸಲ್ಲ ಎಂದು ಆಕೆ ಹೇಳುತ್ತಿದ್ದಳು ಎಂದು ಆಕೆಯ ಸ್ನೇಹಿತರು ತಿಳಿಸಿದ್ದಾರೆ.