ರಷ್ಯಾವನ್ನು “ಭಯೋತ್ಪಾದಕ ರಾಷ್ಟ್ರ” ಎಂದು ಘೋಷಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುಕೆ ಶಾಸಕರನ್ನು ಒತ್ತಾಯಿಸಿದ್ದಾರೆ. ನಮ್ಮ ದೇಶವು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಾಸ್ಕೋದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಕರೆ ನೀಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶದ ವಿರುದ್ಧ ವಿಶೇಷ ಸೇನಾ ಕಾರ್ಯಾಚರಣೆ ಆರಂಭಿಸಿರುವ ಸಂದರ್ಭದಲ್ಲಿ ಅವರು ಈ ಮನವಿ ಮಾಡಿದ್ದಾರೆ. ವೀಡಿಯೋ ಲಿಂಕ್ ಮೂಲಕ ‘ಹೌಸ್ ಆಫ್ ಕಾಮನ್ಸ್’ನಲ್ಲಿ ಐತಿಹಾಸಿಕ ಭಾಷಣ ಮಾಡಿದ ಝೆಲೆನ್ಸ್ಕಿ(44) ಅವರನ್ನು ಸಂಸತ್ ಸದಸ್ಯರು ಎದ್ದುನಿಂತು ಗೌರವಿಸಿದರು. ವಿದೇಶಿ ನಾಯಕರೊಬ್ಬರು ಹೌಸ್ ಆಫ್ ಕಾಮನ್ಸ್ ನಲ್ಲಿ ನೇರವಾಗಿ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಇದೇ ಮೊದಲು.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ‘ಪಾಶ್ಚಿಮಾತ್ಯ ದೇಶಗಳಾದ ನಿಮ್ಮಿಂದ ಸಹಾಯಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಈ ಸಹಾಯಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ, ಬೋರಿಸ್ ಅವರೇ ನಾನು ನಿಮಗೆ ಕೃತಜ್ಞನಾಗಿದ್ದೇನೆ. ದಯವಿಟ್ಟು ರಷ್ಯಾ ವಿರುದ್ಧ ನಿರ್ಬಂಧಗಳ ಒತ್ತಡವನ್ನು ಹೆಚ್ಚಿಸಿ, ದಯವಿಟ್ಟು ಈ ದೇಶವನ್ನು ಭಯೋತ್ಪಾದಕ ರಾಷ್ಟ್ರವೆಂದು ಗುರುತಿಸಿ ಎಂದು ಅವರು ಹೇಳಿದ್ದಾರೆ.
ಭಾವನಾತ್ಮಕ ಭಾಷಣದಲ್ಲಿ, ಝೆಲೆನ್ಸ್ಕಿ ಮಾಜಿ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಮಾತುಗಳನ್ನು ಪುನರಾವರ್ತಿಸಿದರು, ವಾಯುನೆಲೆಗಳು, ಸಮುದ್ರ ರಸ್ತೆಗಳಲ್ಲಿ ರಷ್ಯಾದ ಸೈನ್ಯದೊಂದಿಗೆ ಹೋರಾಡಲು ನೆರವಾಗಲು ಕೋರಿದರು. ರಷ್ಯಾದ ದಾಳಿಯ ನಂತರದ ಪ್ರತಿ ದಿನದ ವಿವರಗಳನ್ನು ನೀಡಿದ ಅವರು, ನಿಮ್ಮಿಂದ ಸಾಧ್ಯವಾದುದನ್ನು ಮಾಡಿ, ಶ್ರೇಷ್ಠತೆಯು ಶ್ರೇಷ್ಠತೆಯನ್ನು ತರುತ್ತದೆ, ನಿಮ್ಮ ದೇಶವು ನಿಮ್ಮ ಜನರನ್ನು ಒಟ್ಟುಗೂಡಿಸುತ್ತದೆ ಎಂದು ಅವರು ತಮ್ಮ ಭಾಷಣ ಮುಗಿಸಿದರು.