ಬೆಂಗಳೂರು: ಒಂದು ಕಾಲದಲ್ಲಿ ಕನ್ನಡದ ಕಣ್ಮಣಿ ಜೀ ಕನ್ನಡ ಎಂದೇ ಜನಪ್ರಿಯತೆ ಪಡೆದಿದ್ದ ಜೀ ಕನ್ನಡ ಚಾನಲ್ ವಿರುದ್ಧ ಈಗ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎಲ್ಲರ ಮನೆ ಮಾತಾಗಿರುವ ‘ಭೂಮಿಗೆ ಬಂದ ಭಗವಂತ’ ಧರಾವಾಹಿಯಲ್ಲಿ ಕನ್ನಡ ಪರ ಹೋರಾಟಗಾರರು, ಕನ್ನಡ ಪರ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂಬುದು ಕನ್ನಡಪರ ಸಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ಎಪಿಸೋಡ್ ಒಂದರಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ನಿಂದಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಧಾರಾವಾಹಿಯ ನಿರ್ದೇಶಕರು, ಚಾನಲ್ ವಿರುದ್ಧ ಸಿಡಿದೆದ್ದಿದ್ದಾರೆ. ಚಾನಲ್ ಬಾಗಿಲು ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಬೆಳವಣಿನೆ ನಡುವೆಯೇ ಎಚ್ಚತ್ತ ‘ಭೂಮಿಗೆ ಬಂದ ಭಗವಂತ’ ಸೀರಿಯಲ್ ನಿರ್ದೇಶಕರು ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಕುರಿತು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾಹಿತಿ ನೀಡಿದ್ದು, ಜೀ ಕನ್ನಡ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಆಗಿರುವ ತಪ್ಪಿಗೆ ಕನ್ನಡ ಪರ ಹೋರಾಟಗಾರರ ಕ್ಷಮೆ ಕೇಳಿದ್ದು, ಆ ಎಪಿಸೋಡ್ ತೆಗೆಯಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.