
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಆರು ತಿಂಗಳಲ್ಲಿ ಪತನವಾಗಲಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್, ಕುಮಾರಸ್ವಾಮಿ ಯಾವುದಾದರೂ ಸರ್ಕಾರ 5 ವರ್ಷ ನಡೆಯಲಿದೆ ಎಂದು ಯವತ್ತಾದರೂ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು. ಯಾವುದಾದರೂ ಸರ್ಕಾರ 5 ವರ್ಷ ನಡೆಯಲಿದೆ ಎಂದಿದ್ದಾರಾ? ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬೀಳುತ್ತೆ ಅಂದ್ರು. ಇವರದ್ದೇ ಸರ್ಕಾರ ಇದ್ದಾಗಲೂ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಸರ್ಕಾರ ಹೇಗೆ ಪತನವಾಗುತ್ತೆ ಎಂದು ಕುಮಾರಸ್ವಾಮಿಯವರೇ ಹೇಳಬೇಕು. ಈ ಹಿಂದೆ ಬಿಜೆಪಿ 104 ಶಾಸಕರು ಇದ್ದುಕೊಂಡು ಆಪರೇಷನ್ ಕಮಲ ಮಾಡಿ 4 ವರ್ಷ ಸರ್ಕಾರ ನಡೆಸಿದರು. ನಾವು 137+3 ಒಟ್ಟು 140 ಜನರಿದ್ದೇವೆ. ಸರ್ಕಾರ ಹೇಗೆ ಬೀಳುತ್ತೆ? ಕುಮಾರಸ್ವಾಮಿ ರಾತ್ರಿ ಕನಸು ಹಗಲು ಕಾಣುತ್ತಿದ್ದಾರೆ ಎಂದು ಹೇಳಿದರು.