18 ಕೋಟಿ ರೂಪಾಯಿ ಮೌಲ್ಯದ 3.5 ಕೆಜಿ ತೂಕದ ಹೆರಾಯಿನ್ನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಂಬಿಯಾ ಪ್ರಜೆಯನ್ನು ಮುಂಬೈ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎಐಯು ಅಧಿಕೃತ ಮಾಹಿತಿ ನೀಡಿದೆ.
ಬಂಧಿತ ಮಹಿಳೆಯನ್ನು 40 ವರ್ಷದ ಕ್ವಿನ್ಸಿ ಚಿಲುತ್ಯಾ ಸಕೇಲಿ ಎಂದು ಗುರುತಿಸಲಾಗಿದೆ. ಈಕೆಯನ್ನು ಅಕ್ರಮ ಮಾದಕ ವಸ್ತು ಹಾಗೂ ಸಾಗಣಿಕಾ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ.
ಬಂಧಿತ ಮಹಿಳೆಯು ಜಾಂಬಿಯಾದಿಂದ ಆದಿಸ್ ಅಬಾಬಾ ಮಾರ್ಗವಾಗಿ ಪ್ರಯಾಣಿಸುತ್ತಿದ್ದಳು. ಬ್ಯಾಗೇಜ್ ತಪಾಸಣೆ ಮಾಡುವ ವೇಳೆಯಲ್ಲಿ ಬರೋಬ್ಬರಿ 3.6 ಕೆಜಿ ತೂಕದ ಅಕ್ರಮ ಮಾದಕ ವಸ್ತು ಪತ್ತೆಯಾಗಿದೆ ಎನ್ನಲಾಗಿದೆ.
ಕಳೆದ ಒಂದು ವಾರದಲ್ಲಿ ಅಕ್ರಮ ಮಾದಕ ವಸ್ತು ಸಾಗಣಿಕೆಯಲ್ಲಿ ಎಐಯುನಿಂದ ಬಂಧಿತರಾದ ಐದನೇ ಆರೋಪಿ ಈ ಮಹಿಳೆಯಾಗಿದ್ದಾಳೆ. ವರದಿಗಳ ಪ್ರಕಾರ, ಈ ಮಾದಕ ವಸ್ತುಗಳನ್ನು ದೆಹಲಿಗೆ ರವಾನೆ ಮಾಡಲು ಪ್ಲಾನ್ ಮಾಡಲಾಗಿತ್ತು. ಇವುಗಳನ್ನು ಭಾರತದ ಮಾರ್ಗವಾಗಿ ಯುರೋಪಿಯನ್ ಮಾರುಕಟ್ಟೆಗಳಿಗೆ ಸಾಗಿಸುವ ಉದ್ದೇಶವನ್ನು ಆರೋಪಿ ಹೊಂದಿದ್ದಳು ಎಂದು ತಿಳಿದುಬಂದಿದೆ.