ಬೆಂಗಳೂರು: ಡಿಸೆಂಬರ್ ನಿಂದ ಯುವನಿಧಿ ಯೋಜನೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ, ಡಿಪ್ಲೋಮಾ ಪದವಿ ಆದ ನಿರುದ್ಯೋಗಿಗಳಿಗೆ ಹಣ ಒದಗಿಸುವ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವನಿಧಿ ಸ್ಕೀಂ ಡಿಸೆಂಬರ್ ನಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಯುವನಿಧಿ ಸ್ಕೀಮ್ ಘೋಷಿಸಲಾಗಿತ್ತು. 2022 – 23ರಲ್ಲಿ ಪದವೀಧರರಾಗಿ ಹೊರಬಂದು ನಿರುದ್ಯೋಗಿಗಳಾಗಿದ್ದಲ್ಲಿ ಅವರಿಗೆ 3000 ರೂ. ಭತ್ಯೆ ನೀಡಲಾಗುವುದು. ಡಿಪ್ಲೋಮಾ ಪದವೀಧರರಿಗೆ 1500 ರೂ. ನೀಡಲಾಗುವುದು. ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆ ಆಶಾದಾಯಕವಾಗಿದ್ದು, ಡಿಸೆಂಬರ್ ನಲ್ಲಿ ಆರಂಭಿಸಲಾಗುವುದು. ಇದರೊಂದಿಗೆ ಕೌಶಲ್ಯ ಇಲಾಖೆಯಿಂದ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ.