ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಯುವನಿಧಿ ಕಾರ್ಯಕ್ರಮದ ವಿರುದ್ಧ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಇನ್ನೆರಡು ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ. ಹಾಗಾಗಿ ತರಾತುರಿಯಲ್ಲಿ ಯುವನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರನ್ನು ಮರುಳು ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಈಗ ಗ್ಯಾರಂಟಿಗೆ ಷರತ್ತು ಹಾಕಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ಈ ಗ್ಯಾರಂಟಿಗಳು ಮುಂದುವರೆಯುವ ವಿಶ್ವಾಸವೇ ಇಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಶಿವಮೊಗ್ಗದಲ್ಲಿ ನಿನ್ನೆ ಯುವನಿಧಿ ಯೋಜನೆ ಜಾರಿ ಮಾಡಿದ್ದಾರೆ. ಯುವನಿಧಿ ಯೋಜನೆ ಎಂದು ಯುವ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.