ಬೆಂಗಳೂರು : ನಮ್ಮ ಸರ್ಕಾರದ 5 ನೇ ಗ್ಯಾರಂಟಿ ‘ಯುವನಿಧಿ’ ಇಂದಿನಿಂದ ಚಾಲನೆಗೊಳ್ಳಲಿದೆ. ಈ ಮೂಲಕ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ಮೂಲಕ ಅವರ ನೆರವಿಗೆ ನಿಲ್ಲಲಿದೆ. ಈ ಯೋಜನೆಯ ಮೂಲಕ ಪದವಿಧರರು ಪ್ರತಿ ತಿಂಗಳು 3 ಸಾವಿರ ಹಾಗೂ ಡಿಪ್ಲೋಮಾ ಪದವಿಧರರು 1500 ಪಡೆಯಲಿದ್ದಾರೆ. ಯುವನಿಧಿ ಯೋಜನೆ ಜಾರಿ ಮೂಲಕ ನಾವು ಚುನಾವಣಾ ಪೂರ್ವ ನೀಡಿದ್ದ ಐದೂ ಗ್ಯಾರಂಟಿಗಳು ಈಡೇರಿದಂತಾಗಿದೆ. ಇದು ನಮ್ಮ ವಚನ ಬದ್ಧತೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗುವುದೇ ಇಲ್ಲ ಎಂದು BJP-JDS ನವರು ಅಪಪ್ರಚಾರ ನಡೆಸಿದ್ದರು. ಈ ಯೋಜನೆಗಳ ಜನಪ್ರಿಯತೆ ಕಂಡು ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಗುಲ್ಲು ಎಬ್ಬಿಸಿದ್ದರು. ಬಡವರ ಕಷ್ಟಕ್ಕೆ ನೆರವಾಗುವ ಈ ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿಭಾಗ್ಯ’ ಎಂದು ಅಣಕವಾಡುವ ಮೂಲಕ ಬಡವರ ಹಸಿವಿನ ಸಂಕಟವನ್ನೇ ಅಪಹಾಸ್ಯ ಮಾಡಿದ್ದರು. ಆದರೆ ನಾವು ವಿರೋಧ ಪಕ್ಷಗಳ ಸಣ್ಣಬುದ್ದಿಯ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ನಮಗೆ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡು ಅವರಿಗೆ ನೆರವಿನ ಹಸ್ತ ನೀಡುವುದು ಮುಖ್ಯವಾಗಿತ್ತು. ಆ ಬದ್ಧತೆಯ ಪ್ರತಿಫಲವೇ ಇಂದು ಜಾರಿಯಾಗುತ್ತಿರುವ ನಮ್ಮ ಐದನೇ ಗ್ಯಾರಂಟಿ ‘ಯುವನಿಧಿ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಿಂದಿನ ಸರ್ಕಾರದ ತಪ್ಪು ಆರ್ಥಿಕ ನೀತಿಗಳು, ನೈಸರ್ಗಿಕ ವಿಕೋಪದಿಂದ ಸಂಭವಿಸಿದ ಭೀಕರ ಬರ, ಕೇಂದ್ರ ಸರ್ಕಾರದ ಅಸಹಾಕಾರ, ಬಡಜನರ ಮೇಲೆ ಕರುಣೆಯಿಲ್ಲದ ವಿಪಕ್ಷ ನಾಯಕರ ಕೊಂಕು ಮಾತುಗಳ ಮಧ್ಯೆ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದು ನಮಗೆ ಅತ್ಯಂತ ದೊಡ್ಡ ಸವಾಲಾಗಿತ್ತು. ಈ ಎಲ್ಲಾ ಸವಾಲುಗಳನ್ನು ಮೀರಿ ಆರ್ಥಿಕ ಶಿಸ್ತು ಹಳಿ ತಪ್ಪದಂತೆ ನಮ್ಮ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ನಮ್ಮ ಸರ್ಕಾರ ಪಾತ್ರವಾಗಿದೆ ಎಂದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.