ಬೆಂಗಳೂರು: ನಟ ಯುವ ರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು. ಅದಕ್ಕೂ ಮುನ್ನ ಯುವ ಪತ್ನಿ ಶ್ರೀದೇವಿ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಪೋಸ್ಟ್ ಬರೆದುಕೊಂಡಿದ್ದಾರೆ.
ನಟ ಯುವ ರಾಜ್ ಕುಮಾರ್, ಪತ್ನಿಗೆ ವಿಚ್ಛೇಧನ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಯುವ ಪತ್ನಿ ಶ್ರೀದೇವಿ ವಿಚ್ಛೇಧನ ನೀಡಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀದೇವಿ ಕೆಲ ಸ್ಪಷ್ಟನೆ ಹಾಗೂ ತನ್ನ ನಿಲುವಿನ ಬಗ್ಗೆ ಬರೆದುಕೊಂಡಿದ್ದಾರೆ. ಕಳೆದ 15 ದಿನಗಳಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆಗಿದ್ದೆ. ಈ ವೇಳೆ ನನ್ನ ಖಾಸಗಿ ಬದುಕನ್ನು ಗೌರವಿಸಿದ್ದಕ್ಕೆ ಧನ್ಯವಾದಗಳು. ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾಗಿದ್ದು ದುರದೃಷ್ಟಕರ. ಆದರೂ ಸಹ ನಿಮ್ಮ ತಾಳ್ಮೆಗೆ, ಸತ್ಯದ ಪರ ದೃತಿಗೆಡದೇ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಸ್ಥೈರ್ಯಕ್ಕೆ, ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ.
ಈ ವಿಚಾರವಾಗಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗಲಿ ಎಂದು ಹಾರೈಸುತ್ತೇನೆ.
ಕಳೆದ 7 ತಿಂಗಳು ತೀವ್ರ ಒತ್ತಡ ಹಾಗೂ ಆಘಾತಗಳಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗ, ಬಾಂಧವರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನೊಂದಿಗೆ ದು:ಖಿಸಿ ಸಾಂತ್ವನ ಹೇಳಿದ ನನ್ನ ವಿದ್ಯಾರ್ಥಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಶಕ್ತಿಯನ್ನು ಮರಳಿ ಪಡೆಯಲು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಾ. ನಿಮ್ಮ ಪ್ರೀತಿ, ದಯೆ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಸತ್ಯ ಹಾಗೂ ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ಮತ್ತೆ ಪುನರುಚ್ಛರಿಸುತ್ತೇನೆ ನನ್ನ ಮೇಲಿನ ಪ್ರತಿಯೊಂದು ಸುಳ್ಳು ಆರೋಪಗಳಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ ಎಂದಿದ್ದಾರೆ.
ಅಲ್ಲದೇ ಹಾರ್ವರ್ಡ್ ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆ ಶುರು ಮಾಡಿದ್ದೇನೆ. ಆ ಕಾಯಕ ಮುಂದುವರೆಸಲು ನಾನು ಅಮೆರಿಕಾಗೆ ಹೋಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ. ಇಲ್ಲಿನ ಕೆಲಸಗಳನ್ನು ಮುಂದುವರೆಸುತ್ತೇನೆ ಎಂದು ತಿಳಿಸಿದ್ದಾರೆ.