ಬೆಂಗಳೂರು: ದೊಡ್ಮನೆ ಹುಡುಗ ಸ್ಯಾಂಡಲ್ ವುಡ್ ಯುವ ನಟ ಯುವರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಯುವ ರಾಜ್ ಕುಮಾರ್, ಪತ್ನಿಗೆ ವಿಚ್ಛೇದನ ನೀಡುವಂತೆ ನೋಟಿಸ್ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ನಟ ಯುವ ರಾಜ್ ಕುಮಾರ್ ಪರ ವಕೀಲರು ಯುವ ಪತ್ನಿ ಶ್ರೀದೇವಿ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಿದ್ದರು. ಬಾಯ್ ಫ್ರೆಂಡ್ ಜೊತೆ ಓಡಾಟ, ಪತಿಯ ಮೇಲೆ ಅಗೌರವ, ರಾಜ್ ಕುಮಾರ್ ಅಕಾಡೆಮಿಯಿಂದ ಕೊಟ್ಯಂತರ ರೂಪಾಯಿ ಹಣ ವರ್ಗಾವಣೆ ಸೇರಿದಂತೆ ಹಲವು ಗುರುತರ ಆಪಾದನೆಗಳನ್ನು ಮಾಡಿದ್ದರು. ಸುಳ್ಳು ಆರೋಪಗಳಿಂದ ನೊಂದಿರುವ ಶ್ರೀದೇವಿ, ಯುವ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಶ್ರೀದೇವಿ ಪರ ವಕೀಲೆ ದೀಪ್ತಿ ಅಯನಾಥ್ ಮಾತನಾಡಿದ್ದು, ಯುವರಾಜ್ ಕುಮಾರ್ ಪರ ವಕೀಲರು ಶ್ರೀದೇವಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆ ಮಾಡುತ್ತಿದ್ದಾರೆ. ಇದು ಹೆಣ್ಣುಮಕ್ಕಳ ಮೇಲೆ ಅವರಿಗಿರುವ ಭಾವನೆ ಗೊತ್ತಾಗುತ್ತದೆ. ಯುವ ಪರ ವಕೀಲರ ಹೇಳಿಕೆಯಿಂದ ಶ್ರೀದೇವಿ ಆಘಾತಕ್ಕೊಳಗಾಗಿದ್ದಾರೆ. ತೀವ್ರವಾಗಿ ನೊಂದಿದ್ದಾರೆ. ಯುವ ರಾಜ್ ಕುಮಾರ್ ಪರ ವಕೀಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಎಂದಿದ್ದಾರೆ.
ಶ್ರೀದೇವಿಯನ್ನು ಓದು ಎಂದು ಯುವ ಅವರೇ ಅಮೆರಿಕಾಗೆ ಕಳುಹಿಸಿದ್ದು, ಈಗ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಶ್ರೀದೇವಿಗೆ ಯುವ ಡಿಸೆಂಬರ್ ನಲ್ಲಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ ಗೆ ಹೇಗೆ ಉತ್ತರಿಸಬೇಕು ಹಾಗೇ ಉತ್ತರ ಕೊಡುತ್ತೇವೆ. ಆದರೆ ಈಗ ಮಾಧ್ಯಮಗಳ ಮುಂದೆ ಬಂದು ಯುವ ಪರ ವಕೀಲರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಮಾನನಷ್ಟಮೊಕದ್ದಮೆ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.