ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಕಂಪನಿ ಯುಲು ತನ್ನ ಮೊದಲ ವೈಯಕ್ತಿಕ ಎಲೆಕ್ಟ್ರಿಕ್ ಸ್ಕೂಟರ್ ವಿನ್ ಅನ್ನು 55,555 ರೂ. ಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಿದೆ. ಸೀಮಿತ ಅವಧಿಗೆ ಈ ಆಫರ್ ಇದ್ದು, ಇದಾದ ಬಳಿಕ ಸ್ಕೂಟರ್‌ನ ಬೆಲೆ 64,999 ರೂ.ಗಳಿಗೆ ಏರಲಿದೆ.
ಯುಲು ಅಪ್ಲಿಕೇಶನ್ ಮೂಲಕ ವಿನ್ ಸ್ಕೂಟರ್ ಅನ್ನು 999 ರೂ.ಗಳ ಮುಂಗಡ ಪಾವತಿ ಮಾಡಿ ಬುಕ್ ಮಾಡಬಹುದಾಗಿದ್ದು, ಮೇ ವೇಳಗೆ ಡೆಲಿವರಿಯಾಗುವ ನಿರೀಕ್ಷೆ ಇದೆ.
ಮುಂಬದಿ ಹಾಗೂ ಹಿಂಬದಿಯಲ್ಲಿ 12 ಇಂಚಿನ ಚಕ್ರಗಳು, ಡ್ರಮ್ ಬ್ರೇಕ್‌ಗಳನ್ನು ಸ್ಕೂಟರ್‌ಗೆ ನೀಡಲಾಗಿದೆ. ಇದೇ ವೇಳೆ, 250 ವ್ಯಾಟ್ ಹಬ್-ಮೌಂಟೆಡ್ ಮೋಟರ್ ಮೂಲಕ ವಿನ್ 25 ಕಿಮೀ ಗರಿಷ್ಠ ವೇಗದಲ್ಲಿ ಚಲಿಸಬಹುದಾಗಿದೆ. 0.9 ಕಿವ್ಯಾ ಬ್ಯಾಟರಿಯು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 68 ಕಿಮೀ ದೂರ ಓಡಲಿದೆ ಎಂದು ಯುಲು ಹೇಳಿಕೊಂಡಿದೆ.
ಕಡಿಮೆ ವೇಗದ್ದಾಗಿರುವ ಕಾರಣ ಈ ಸ್ಕೂಟರ್ ಓಡಿಸಲು ಲೈಸೆನ್ಸ್ ಅಗತ್ಯವಿಲ್ಲದ ಕಾರಣ 16 ರ ಹದಿಹರೆಯದವರೂ ಚಾಲನೆ ಮಾಡಬಹುದಾಗಿದೆ. ದೇಶಾದ್ಯಂತ 100ರಷ್ಟು ಪಾಯಿಂಟ್‌ಗಳನ್ನು ಹೊಂದಿರುವ ಯುಮಾ ಎನರ್ಜಿ ಈ ಸ್ಕೂಟರ್‌ನ ಬ್ಯಾಟರಿ ಬದಲಾವಣೆಗೆ ಸಪೋರ್ಟ್ ಹೊಂದಿದೆ. ಡಿಸೆಂಬರ್ ವೇಳೆಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರಗಳನ್ನು 500ಕ್ಕೆ ಹೆಚ್ಚಿಸುವುದಾಗಿ ಕಂಪನಿ ಹೇಳಿಕೊಂಡಿದೆ.
499 ರೂ. ಗಳಿಂದ ಹಿಡಿದು 899 ರೂ. ಗಳ ವರೆಗೆ ವಿವಿಧ ಹಂತಗಳ ’ಬ್ಯಾಟರಿ ಚಂದಾದಾರಿಕೆ’ಯನ್ನು ಯುಲು ಕೊಡಮಾಡುತ್ತಿದೆ (ಬೌನ್ಸ್ ಇನ್ಫಿನಿಟಿ ಇ1ನಂತೆ). ಇದರೊಂದಿಗೆ ಗ್ರಾಹಕರು ಅಕ್ಸೆಸರಿ ಪೋರ್ಟಬಲ್ ಚಾರ್ಜರ್‌ಗಳನ್ನು ಸಹ ಖರೀದಿ ಮಾಡಬಹುದಾಗಿದೆ.